ಹೊಸದಿಲ್ಲಿ: ಇನ್ನು ಮುಂದೆ ಅಪರಿಚಿತ ಕರೆಗಳ ಬಗ್ಗೆ ತಿಳಿದುಕೊಳ್ಳಲು ಟ್ರೂ ಕಾಲರ್ ಆ್ಯಪ್ ಅಗತ್ಯ ಇಲ್ಲ. ಏಕೆಂದರೆ, ಯಾರೇ ಕರೆ ಮಾಡಿದರು ಕರೆ ಸ್ವೀಕರಿಸುವ ವ್ಯಕ್ತಿಯ ಮೊಬೈಲ್ ಪರದೆ ಮೇಲೆ ಕರೆ ಮಾಡಿದ ವ್ಯಕ್ತಿಯ ಹೆಸರು ಬಿತ್ತರಗೊಳ್ಳುವ ವ್ಯವಸ್ಥೆ ಸಿಎನ್‌ಎಪಿ (ಕಾಲಿಂಗ್ ನೇಮ್ ಪ್ರೆಸೆಂಟೇಷನ್) ರೂಪಿಸಲು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟಿಆರ್‌ಎಐ) ಮುಂದಾಗಿದೆ.
ಸಿಮ್ ಪಡೆದುಕೊಂಡಾಗ ನೀಡಿದ ಕೆವೈಸಿ ದಾಖಲೆಯಲ್ಲಿರುವ ಹೆಸರನ್ನೇ ಪರದೆ ಮೇಲೆ ಬಿತ್ತರಗೊಳಿಸುವ ರೀತಿಯಲ್ಲಿವ್ಯವಸ್ಥೆ ರೂಪಿಸಲು ಎಲ್ಲಾ ಮೊಬೈಲ್ ನೆಟ್‌ವರ್ಕ್ಗಳಿಗೆ ಟ್ರಾಯ್ ನಿರ್ದೇಶನ ನೀಡಿದೆ.
ಪರವಾನಗಿ ಪಡೆದ ಯಾವುದಾದರೂ ಒಂದು ಸೇವಾ (ಎಲ್‌ಎಸ್‌ಎ) ವಲಯದಲ್ಲಿ ಪ್ರಾಯೋಗಿಕವಾಗಿ ಈ ಸೇವೆ ಆರಂಭಿಸುವಂತೆ ಟ್ರಾಯ್ ಸೂಚನೆ ನೀಡಿದೆ. ಹಂತ ಹಂತವಾಗಿ ದೇಶಾದ್ಯಂತ ಸೇವೆ ಜಾರಿ ಮಾಡುವಂತೆ ಸೂಚಿಸಿದೆ.
ಕರೆ ಮಾಡಿದಾಗ ಬಿತ್ತರಗೊಳ್ಳುವ ಸಂಖ್ಯೆಗೆ ಬದಲಾಗಿ ಕರೆ ಮಾಡಿದಾತನ ಹೆಸರು ಬಿತ್ತರಗೊಳ್ಳಬೇಕು. ಒಂದು ವೇಳೆ ಹೆಸರು ಬದಲಾಗಿದ್ದರೆ ಸಿಮ್ ಪಡೆಯಲು ನೀಡಿದ ದಾಖಲೆಯಲ್ಲಿರುವ ಹೆಸರು ಪರದೆ ಮೇಲೆ ಕಾಣಿಸಿಕೊಳ್ಳುವ ರೀತಿಯಲ್ಲಿವ್ಯವಸ್ಥೆ ರೂಪಿಸಲು ಸಲಹೆ ನೀಡಿದೆ. ಇದಕ್ಕಾಗಿ ದೂರಸಂಪರ್ಕ ಮಾರ್ಗಸೂಚಿ (ಟಿಎಸ್‌ಪಿ) ಬಿಡುಗಡೆ ಮಾಡಿದೆ.