ಅಲಹಾಬಾದ್: ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಒಂದು ನೆಲಮಾಳಿಗೆ ವಿಭಾಗದಲ್ಲಿ ಹಿಂದೂಗಳು ಪೂಜೆ ಸಲ್ಲಿಸಲು ವಾರಾಣಸಿ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿರುವ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಇದು ಮುಸ್ಲಿಂ ಬಣಕ್ಕೆ ಮತ್ತೊಂದು ಹಿನ್ನಡೆ ಉಂಟುಮಾಡಿದೆ.
ಜ್ಞಾನವಾಪಿ ಮಸೀದಿಯ ದಕ್ಷಿಣ ಭಾಗದ ನೆಲಮಾಳಿಗೆಯಲ್ಲಿ ಹಿಂದೂ ಅರ್ಚಕರು ಪೂಜೆ ಸಲ್ಲಿಸಲು ಅನುಮತಿ ನೀಡಿ ವಾರಾಣಸಿ ಜಿಲ್ಲಾ ನ್ಯಾಯಾಲಯವು ಜನವರಿ 31ರಂದು ತೀರ್ಪು ಕೊಟ್ಟಿತ್ತು.
31 ವರ್ಷಗಳ ನಂತರ ಇದೇ ತಿಂಗಳ ಆರಂಭದಲ್ಲಿ ಜ್ಞಾನವಾಪಿ ಮಸೀದಿ ಆವರಣದಲ್ಲಿ ಪ್ರಥಮ ಬಾರಿಗೆ ಪೂಜೆ ನೆರವೇರಿಸಲಾಗಿತ್ತು. ಮಸೀದಿಯು ನಾಲ್ಕು ʼತೆಹ್ಖಾನಾಗಳು’ ಅಥವಾ ನೆಲಮಾಳಿಗೆಗಳನ್ನು ಹೊಂದಿದೆ. ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಜನವರಿ 31ರ ಆದೇಶದಲ್ಲಿ ಜ್ಞಾನವಾಪಿ ಮಸೀದಿಯ ದಕ್ಷಿಣ ಭಾಗದಲ್ಲಿರುವ ನೆಲಮಾಳಿಗೆಯಲ್ಲಿ ಪೂಜೆಗೆ ಅನುಮತಿ ನೀಡಿದ್ದರು. ನಂತರ, ಶೈಲೇಂದ್ರ ಕುಮಾರ್ ಪಾಠಕ್ ವ್ಯಾಸ್ ಮತ್ತು ಶ್ರೀಗಳು ಸೂಚಿಸಿದ ಅರ್ಚಕರಿಂದ ಏಳು ದಿನಗಳಲ್ಲಿ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ಮೂಲಕ ವಿಗ್ರಹಗಳ ಪೂಜೆಗೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.