ಅಗರ್ತಲಾ: ಮೃಗಾಲಯದ ಸಿಂಹ ಮತ್ತು ಸಿಂಹಿಣಿಗೆ ಕ್ರಮವಾಗಿ ಅಕ್ಬರ್ ಮತ್ತು ಸೀತಾ ಎಂದು ನಾಮಕರಣ ಮಾಡಿದ ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ಮತ್ತು ಪರಿಸರ ಪ್ರವಾಸೋದ್ಯಮ) ಪ್ರಬಿನ್ ಲಾಲ್ ಅಗರವಾಲ್ ಅವರನ್ನು ತ್ರಿಪುರಾ ಸರ್ಕಾರವು ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.
ಅಕ್ಬರ್ ಮತ್ತು ಸೀತಾ ಈ ಹೆಸರುಗಳು ಹಿಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಲ್ಕತ್ತಾ ಹೈಕೋರ್ಟ್‌ಗೆ ದೂರು ನೀಡಿದ ನಂತರ ಅಮಾನತುಗೊಳಿಸಲಾಗಿದೆ.
ಅಮಾನತ್ತಾದ ಅಧಿಕಾರಿ ಪ್ರಬೀನ್ ಲಾಲ್ ಅಗರ್ವಾಲ್ ಅವರು 1994ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿದ್ದರು. ತ್ರಿಪುರಾ ರಾಜ್ಯದಲ್ಲಿ ಮುಖ್ಯ ವನ್ಯಜೀವಿ ವಾರ್ಡನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಫೆಬ್ರವರಿ 12 ರಂದೇ ತ್ರಿಪುರಾದ ಸೆಪಾಹಿಜಲ ಮೃಗಾಲಯದಿಂದ ಸಿಲಿಗುರಿಯ ಉತ್ತರ ಬಂಗಾಳ ವನ್ಯ ಮೃಗಗಳ ಉದ್ಯಾನಕ್ಕೆ ಸಿಂಹ ಮತ್ತು ಸಿಂಹಿಣಿಯನ್ನು ವನ್ಯಜೀವಿಗಳ ವಿನಿಮಯ ಕಾರ್ಯಕ್ರಮದ ಅಡಿ ವರ್ಗಾವಣೆ ಮಾಡಲಾಗಿದೆ.
ವನ್ಯಜೀವಿಗಳನ್ನು ತ್ರಿಪುರಾ ರಾಜ್ಯದಿಂದ ಪಶ್ಚಿಮ ಬಂಗಾಳ ರಾಜ್ಯದ ಸಿಲಿಗುರಿಗೆ ವರ್ಗಾವಣೆ ಮಾಡುವ ವೇಳೆ ಅಲ್ಲಿನ ರಿಜಿಸ್ಟರ್ ಪುಸ್ತಕದಲ್ಲಿ ಸಿಂಹದ ಹೆಸರನ್ನು ಅಕ್ಬರ್ ಎಂದೂ, ಸಿಂಹಿಣಿ ಹೆಸರನ್ನು ಸೀತಾ ಎಂದು ನಮೂದಿಸಲಾಗಿತ್ತು ಎನ್ನಲಾಗಿದೆ.