ಹೊಸದಿಲ್ಲಿ: ಮಹತ್ವದ ರಾಜಕಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಕೇರಳದ ವಯನಾಡು ಕ್ಷೇತ್ರ ತೊರೆದು ಮತ್ತೊಂದು ರಾಜ್ಯಕ್ಕೆ ವಲಸೆ ಹೋಗಲು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.
2019ರಲ್ಲಿ ಉತ್ತರ ಪ್ರದೇಶದ ಅಮೇಠಿ ಹಾಗೂ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ, ವಯನಾಡು ಕ್ಷೇತ್ರದಲ್ಲಿ 4 ಲಕ್ಷ ಮತಗಳ ಭಾರೀ ಅಂತರದಿಂದ ಜಯಗಳಿಸಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ರಾಜಕೀಯ ಕಾರಣದಿಂದ ರಾಹುಲ್ ಗಾಂಧಿ ಕ್ಷೇತ್ರ ಬಿಟ್ಟು ಮತ್ತೊಂದು ಸುರಕ್ಷಿತ ಕ್ಷೇತ್ರ ಹುಡುಕುತ್ತಿದ್ದು, ಮತ್ತೊಮ್ಮೆ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಲು ಒಲವು ತೋರಿದ್ದಾರೆ.
ರಾಹುಲ್‌ಗೆ ಶಾಕ್ ನೀಡಿದ ಸಿಪಿಐ: ಇಂಡಿಯಾ ಮೈತ್ರಿ ಕೂಟದ ಭಾಗವಾಗಿರುವ ಸಿಪಿಐ (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ) ವಯನಾಡಿನಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ.
ಕೇರಳದಲ್ಲಿ ಲೋಕಸಭೆ ಚುನಾವಣೆಗೆ ನಾಲ್ಕು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿಪಿಐ ಸೋಮವಾರ ಬಿಡುಗಡೆ ಮಾಡಿದೆ. ರಾಷ್ಟ್ರೀಯ ಮಟ್ಟದಲ್ಲಿ INDIA ಮೈತ್ರಿಕೂಟದ ಭಾಗವಾಗಿರುವ ಸಿಪಿಐ ತಿರುವನಂತಪುರಂನಿಂದ ಪನ್ನಿಯನ್ ರವೀಂದ್ರನ್ ಮತ್ತು ವಯನಾಡಿನಿಂದ ಅನ್ನಿ ರಾಜಾ ಅವರನ್ನು ಕಣಕ್ಕಿಳಿಸಿದೆ. ವಿಎಸ್ ಸುನೀಲ್ ಕುಮಾರ್ ತ್ರಿಶೂರ್ ಮತ್ತು ಅರುಣ್ ಕುಮಾರ್ ಮಾವೇಲಿಕರದಿಂದ ಸ್ಪರ್ಧಿಸಲಿದ್ದಾರೆ.
ಕಾಂಗ್ರೆಸ್‌ನ ಶಶಿ ತರೂರ್ ಅವರು ತಿರುವನಂತಪುರಂನ ಹಾಲಿ ಸಂಸದರಾಗಿದ್ದು, ರಾಹುಲ್ ಗಾಂಧಿ ವಯನಾಡ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ರಾಹುಲ್ ಗಾಂಧಿ ಮತ್ತೆ ವಯನಾಡಿನಿಂದ ಸ್ಪರ್ಧಿಸಿದರೆ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರ ಪತ್ನಿ ಅನ್ನಿ ರಾಜಾ ಅವರನ್ನು ಎದುರಿಸಬೇಕಾಗುತ್ತದೆ.