ರಾಂಚಿ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಉತ್ತಮ ಲಯದಲ್ಲಿದ್ದಾರೆ. ತಮ್ಮ ಅದ್ಭುತ ಆಟದ ಮೂಲಕ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಸರಣಿಯ ನಾಲ್ಕನೇ ಪಂದ್ಯದಲ್ಲಿ ಒಟ್ಟು 100ಕ್ಕೂ ಹೆಚ್ಚು ರನ್ ಕಲೆಹಾಕಿದ ಜೈಸ್ವಾಲ್, ದಿಗ್ಗಜರನ್ನು ಹಿಂದಿಕ್ಕಿ, ಕ್ರಿಕೆಟ್ ದಂತಕತೆ ಡಾನ್ ಬ್ರಾಡ್ಮನ್ ನಂತರದ ಸ್ಥಾನ ಪಡೆದಿದ್ದಾರೆ.
22 ವರ್ಷದ ಯುವ ಎಡಗೈ ಬ್ಯಾಟರ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಬದುಕಿನಲ್ಲಿ ಆಡಿದ ಮೊದಲ 8 ಪಂದ್ಯಗಳಲ್ಲಿ ಈಗಾಗಗಲೇ 971 ರನ್‌ಗಳನ್ನು ಬಾರಿಸಿದ್ದಾರೆ. ಮೊದಲ 8 ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ಈಗ 2ನೇ ಸ್ಥಾನ ಅಲಂಕರಿಸಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಡಾನ್ ಬ್ರಾಡ್ಮನ್ 1210 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಮುಂದಿನ ದಿನಗಳಲ್ಲೂ ಜೈಸ್ವಾಲ್ ಇದೇ ಲಯ ಕಾಯ್ದುಕೊಂಡರೆ ಡಾನ್ ಬ್ರಾಡ್ಮನ್ ಹೆಸರಲ್ಲಿರುವ ಹಲವು ದಾಖಲೆಗಳನ್ನು ಮುರಿಯುವ ಅವಕಾಶ ಹೊಂದಿದ್ದಾರೆ.
ಜೈಸ್ವಾಲ್ ಈವರೆಗೆ ಆಡಿರುವ 15 ಇನಿಂಗ್ಸ್‌ಗಳಲ್ಲಿ 69.35ರ ಸರಾಸರಿಯಲ್ಲಿ ತಲಾ 3 ಶತಕ ಮತ್ತು ಅರ್ಧಶತಕಗಳೊಂದಿಗೆ 971 ರನ್ ಬಾರಿಸಿದ್ದಾರೆ. ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಜೈಸ್ವಾಲ್ ಈಗಾಗಲೇ ಎರಡು ಡಬಲ್ ಹಂಡ್ರೆಡ್ ಬಾರಿಸಿದ್ದಾರೆ.
ಕೊಹ್ಲಿ ದಾಖಲೆ ಉಡೀಸ್
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿ ಒಂದರಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಈಗ ಯಶಸ್ವಿ ಜೈಸ್ವಾಲ್ ಪಾಲಾಗಿದೆ. 2016-17ರ ಇಂಗ್ಲೆಂಡ್ ತಂಡದ ಭಾರತ ಪ್ರವಾಸದಲ್ಲಿ ನಡೆದಿದ್ದ 4 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಒಟ್ಟು 655 ರನ್‌ಗಳನ್ನು ಬಾರಿಸಿದ್ದರು. ಈ ದಾಖಲೆಯನ್ನು ಯಶಸ್ವಿ ಜೈಸ್ವಾಲ್ ಈಗ ಸರಿ ದೂಗಿಸಿದ್ದಾರೆ. ಮಾರ್ಚ್ 7ರಂದು ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಶುರುವಾಗಲಿರುವ ಸರಣಿಯ 5ನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಕೇವಲ ಒಂದು ರನ್ ಗಳಿಸಿದರೂ ಕೊಹ್ಲಿ ಹೆಸರಲ್ಲಿದ್ದ ದಾಖಲೆ ಅಳಿಸಿಹಾಕಲಿದ್ದಾರೆ.
ಬ್ಯಾಕ್ ಟು ಬ್ಯಾಕ್ ದ್ವಿಶತಕ
ಇಂಗ್ಲೆಂಡ್ ಎದುರು ಯಶಸ್ವಿ ಜೈಸ್ವಾಲ್ ಬ್ಯಾಕ್ ಟು ಬ್ಯಾಕ್ ದ್ವಿಶತಕ ಬಾರಿಸಿದ್ದಾರೆ. ವೈಝಾಗ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 209 ರನ್ ಬಾರಿಸಿ ಭಾರತ ತಂಡಕ್ಕೆ 106 ರನ್‌ಗಳ ಜಯ ತಂದಿದ್ದರು. ಬಳಿಕ ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ಅಂಥದ್ದೇ ಆಟವಾಡಿ ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 214 ರನ್ ಬಾರಿಸುವ ಮೂಲಕ ತಂಡಕ್ಕೆ ದಾಖಲೆಯ ಬೃಹತ್ ಮೊತ್ತದ ಅಂದರೆ 434 ರನ್‌ಗಳ ಜಯ ತಂದುಕೊಟ್ಟರು. ಸರಣಿ ಒಂದರಲ್ಲೇ ಬ್ಯಾಕ್ ಟು ಬ್ಯಾಕ್ ದ್ವಿಶತಕ ಬಾರಿಸಿದ ಭಾರತದ ಮೊದಲ ಬ್ಯಾಟರ್ ಎಂಬ ದಾಖಲೆ ಯಶಸ್ವಿ ಜೈಸ್ವಾಲ್ ಪಾಲಾಗಿದೆ.