ತಿರುವನಂತಪುರಂ: ಭಾರತದ ಬಹು ಮಹತ್ವಾಕಾಂಕ್ಷಿ ಗಗನಯಾನ ಯೋಜನೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣಿಸಲಿರುವ ನಾಲ್ವರು ಗಗನಯಾನಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಬಹಿರಂಗಪಡಿಸಿದರು. ಬಾಹ್ಯಾಕಾಶ ಪಯಣಕ್ಕೆ ಆಯ್ಕೆಯಾದ ನಾಲ್ವರು ಸಾಹಸಿಗರಿಗೆ ಗಗನಯಾನ ರೆಕ್ಕೆಯ ಬ್ಯಾಡ್ಜ್‌ಗಳನ್ನು ನೀಡಿದರು.
ಪ್ರಧಾನಮಂತ್ರಿಯವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದ ಮೂರು ಪ್ರಮುಖ ತಾಂತ್ರಿಕ ಸೌಲಭ್ಯಗಳನ್ನು ಉದ್ಘಾಟಿಸಲು VSSC ಗೆ ಬಂದಿದ್ದರು. ಕೇರಳ ರಾಜ್ಯದ ರಾಜಧಾನಿ ಬಳಿಯ ತುಂಬಾದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗಗನಯಾನ ಮಿಷನ್ ಗೆ ಆಯ್ಕೆಯಾಗಿರುವ ನಾಲ್ಕು ಮಂದಿ ಗಗನಯಾನಿಗಳ ಹೆಸರನ್ನು ಘೋಷಣೆ ಮಾಡಿದ್ದಾರೆ.
ಪ್ರಧಾನಿ ಮೋದಿ ಘೋಷಣೆ ಮಾಡಿದ ನಾಲ್ವರು ಗಗನಯಾತ್ರಿಗಳೆಂದರೆ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ಶುಭಾಂಶು ಶುಕ್ಲಾ.
ನಾಲ್ಕು ಮಂದಿ ಗಗನಯಾತ್ರಿಗಳಿಗೆ ಗಗನಯಾನದ ಕಿಟ್ ನೀಡುವ ಮೂಲಕ ಪ್ರಧಾನಿ ಮೋದಿ ಅವರಿಗೆ ಶುಭ ಕೋರಿದರು. ಅಲ್ಲದೆ ಅವರು ದೇಶದ 1.4 ಬಿಲಿಯನ್ ಜನರ ಆಕಾಂಕ್ಷೆಗಳನ್ನು ಒಳಗೊಂಡಿರುವ ನಾಲ್ಕು ಶಕ್ತಿಗಳು ಎಂದೂ ಬಣ್ಣಿಸಿದರು.
ಬಳಿಕ ಮಾತನಾಡಿದ ಪ್ರಧಾನಿ ಮೋದಿ, ‘ನಾಲ್ಕು ದಶಕಗಳ ನಂತರ, ಒಬ್ಬ ಭಾರತೀಯನು ಬಾಹ್ಯಾಕಾಶಕ್ಕೆ ತೆರಳಲು ಸಿದ್ಧನಾಗಿದ್ದಾನೆ. “ಈ ಬಾರಿ ಕೌಂಟ್‌ಡೌನ್, ಸಮಯ ಮತ್ತು ರಾಕೆಟ್ ಕೂಡ ನಮ್ಮದಾಗಿರಲಿದೆ. ಗಗನಯಾನ ಮಾನವ ಹಾರಾಟದ ಮಿಷನ್‌ನಲ್ಲಿ ಬಳಸಲಾದ ಹೆಚ್ಚಿನ ಉಪಕರಣಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಎಂಬುದಕ್ಕೆ ನನಗೆ ಹೆಮ್ಮೆ ಮತ್ತು ಸಂತೋಷವಾಗಿದೆ ಎಂದರು.