ವಯನಾಡು: ಕಾಡಾನೆ ತುಳಿದು ಸಾವನ್ನಪ್ಪಿದ ಕೇರಳದ ಪದಮಲ ಮೂಲದ ಅಜೀಶ್ ಅವರ ಕುಟುಂಬವು ಕರ್ನಾಟಕ ಸರ್ಕಾರ ಘೋಷಿಸಿದ 15 ಲಕ್ಷ ರೂಪಾಯಿ ಪರಿಹಾರವನ್ನು ನಿರಾಕರಿಸಿದೆ.
ಕರ್ನಾಟಕ ವಿಧಾನಸಭೆಯಲ್ಲಿ ಪರಿಹಾರದ ಕುರಿತು ಬಿಜೆಪಿ ಗದ್ದಲ ಸೃಷ್ಟಿಸಿದ ನಂತರ ಕುಟುಂಬ ಈ ನಿರ್ಧಾರ ತೆಗೆದುಕೊಂಡಿದೆ. ಅಜೀಶ್ ಅವರ ಕುಟುಂಬವು ಬಿಜೆಪಿಯ ನಡವಳಿಕೆಯನ್ನು ಖಂಡಿಸಿದ್ದು ಇದು ಅಮಾನವೀಯ ಎಂದು ಬಣ್ಣಿಸಿದೆ.
ಫೆಬ್ರವರಿ 10ರಂದು ಕಾಡಾನೆ ಅಜೀಶ್‌ರನ್ನು ತುಳಿದು ಕೊಂದಿತ್ತು. ಆನೆಗೆ ಕರ್ನಾಟಕ ಸರ್ಕಾರ ರೇಡಿಯೋ ಕಾಲರ್ ಅಳವಡಿಸಿದ್ದರಿಂದ ಕರ್ನಾಟಕ ಸರ್ಕಾರ ಅಜೀಶ್ ಕುಟುಂಬಕ್ಕೆ ಭಾರಿ ಪರಿಹಾರ ಘೋಷಿಸಿತ್ತು.
ವಯನಾಡು ಸಂಸದ ರಾಹುಲ್ ಗಾಂಧಿ ಅವರು ಅಜೀಶ್ ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ನಂತರ ಕರ್ನಾಟಕ ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ ನಂತರ ಸಚಿವ ಈಶ್ವರ್ ಖಂಡ್ರೆ ಅವರು 15 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದರು.
ಈ ವಿಷಯವಾಗಿ ಬಿಜೆಪಿ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿತ್ತು. ರಾಜ್ಯದ ತೆರಿಗೆ ಹಣ ರಾಹುಲ್ ಗಾಂಧಿ ಕ್ಷೇತ್ರಕ್ಕೆ ಎಂದು ಬಿಜೆಪಿ ನಾಯಕರು ಲೇವಡಿ ಮಾಡಿದ್ದರು. ಇದರಿಂದಾಗಿ ಈ ವಿವಾದದ ಹಣವನ್ನು ಕುಟುಂಬ ನಿರಾಕರಿಸಿದೆ.