ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಕರ್ನಾಟಕ ರಾಜ್ಯಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ತನ್ನ ಪಾಲಿನ ಮೂರು ಸೀಟನ್ನು ಗೆದ್ದುಕೊಂಡಿದೆ. ಇನ್ನು ಬಿಜೆಪಿ ನಿರೀಕ್ಷೆಯಂತೆ 1 ಸ್ಥಾನವನ್ನು ಪಡೆದುಕೊಂಡಿದೆ. ಆದರೆ, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರು ಸೋಲು ಕಂಡಿದ್ದಾರೆ. ಈ ಮೂಲಕ ಕುಮಾರಸ್ವಾಮಿ, ಬಿಜೆಪಿ ನಾಯಕರ ಲೆಕ್ಕಾಚಾರ ತಲೆಕೆಳಗಾಗಿದೆ. ಇದರೊಂದಿಗೆ ಲೋಕಸಭಾ ಚುನಾವಣೆಗೂ ಮುನ್ನವೇ ಮೈತ್ರಿಗೆ ಮತ್ತೊಂದು ಸೋಲಾದಂತಾಗಿದೆ.
ಸಂಖ್ಯಾಬಲ ಕೊರತೆ ನಡುವೆಯೂ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಎನ್‌ಡಿಎ ಮ್ಯಾಜಿಕ್ ಮಾಡುವಲ್ಲಿ ಸೋತಿದೆ. ಪಕ್ಷೇತರರು ನಿರೀಕ್ಷೆಯಂತೆಯೇ ಕೈ ಹಿಡಿದ್ದಾರೆ. ಬಿಜೆಪಿಯ ಎಸ್‌ಟಿ ಸೋಮಶೇಖರ್ ಎಲ್ಲರ ನಿರೀಕ್ಷೆ ಮೀರಿ ಕಾಂಗ್ರೆಸ್‌ಗೆ ವೋಟ್ ಹಾಕಿದ್ದಾರೆ. ಅವರ ಸಾಥಿ ಶಿವರಾಮ್ ಹೆಬ್ಬಾರ್ ಮತದಾನದಿಂದಲೇ ದೂರ ಉಳಿದು ಬಿಜೆಪಿಗೆ ಡ್ಯಾಮೇಜ್ ಮಾಡಿದ್ದಾರೆ. ಪರಿಣಾಮ ಎನ್‌ಡಿಎಯ ಎರಡನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೋಲನುಭವಿಸಿದ್ದಾರೆ.
ನಿರೀಕ್ಷೆಯಂತೆಯೇ ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ಮಕೇನ್, ಜಿಸಿ ಚಂದ್ರಶೇಖರ್, ನಾಸೀರ್ ಹುಸೇನ್ ಮತ್ತು ಬಿಜೆಪಿಯ ನಾರಾಯಣ ಸಾ ಬಾಂಡಗೆ ಅವರು ಗೆದ್ದು ರಾಜ್ಯಸಭೆ ಪ್ರವೇಶಿಸಲಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಬಿಜೆಪಿ-ಜೆಡಿಎಸ್ ಪಡಸಾಲೆಯಲ್ಲಿ ನಿರಾಸೆ ಆವರಿಸಿದೆ.
ರಾಜ್ಯಸಭೆ ಫಲಿತಾಂಶ
* ಅಜಯ್ ಮಕೇನ್ – 47 ಮತ – ಗೆಲುವು
* ನಾಸೀರ ಹುಸೇನ್ -47 ಮತ – ಗೆಲುವು
* ಜಿಸಿ ಚಂದ್ರಶೇಖರ್ – 45 ಮತ -ಗೆಲುವು
* ನಾರಾಯಣ ಸಾ ಬಾಂಡಗೆ – 48 ಮತ -ಗೆಲುವು
* ಕುಪೇಂದ್ರ ರೆಡ್ಡಿ – 35 ಮತ – ಸೋಲು