ಮುಂಬೈ: ಒಮ್ಮೆ ಕ್ಯಾನ್ಸರ್‌ಗೆ ತುತ್ತಾದವರು ಎರಡನೇ ಬಾರಿ ಕ್ಯಾನ್ಸರ್‌ಗೆ ತುತ್ತಾಗುವುದನ್ನು ತಡೆಯಲು ಟಾಟಾ ಇನ್‌ಸ್ಟಿಟ್ಯೂಟ್ ಮಾತ್ರೆಯೊಂದನ್ನು ಅಭಿವೃದ್ಧಿ ಪಡಿಸಿದ್ದು, ಅದರ ಬೆಲೆ ಕೇವಲ 100ರು. ಎಂದು ಸಂಸ್ಥೆ ತಿಳಿಸಿದೆ.
ಸಂಶೋಧಕರು 10 ವರ್ಷಗಳ ಕಾಲ ಸಂಶೋಧನೆ ನಡೆಸಿದ ಬಳಿಕ ಮಾತ್ರೆ ಅಭಿವೃದ್ಧಿ ಪಡಿಸಿದ್ದು ವಿಕಿರಣ ಮತ್ತು ಕೀಮೋಥೆರಪಿಯಂತಹ ಚಿಕಿತ್ಸೆಗಳ ಅಡ್ಡಪರಿಣಾಮಗಳನ್ನು ಶೇ. 50ರಷ್ಟು ಮಾತ್ರೆ ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷದಿಂದ ಕೋಟಿ ರೂ. ವೆಚ್ಚವಾಗುತ್ತಿದ್ದು, ಈ ಮಾತ್ರೆಯ ಬೆಲೆ ಕೇವಲ 100 ರೂ. ಇರಲಿದೆ ಎಂದು ಟಾಟಾ ಸಂಸ್ಥೆ ಹೇಳಿದೆ.
ಸಂಶೋಧನಾ ಗುಂಪಿನ ಭಾಗವಾಗಿದ್ದ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ರಾಜೇಂದ್ರ ಬದ್ವೆ ಪ್ರತಿಕ್ರಿಯಿಸಿ, ಸಂಶೋಧನೆಗಾಗಿ ಆರಂಭದಲ್ಲಿ ಇಲಿಗಳಲ್ಲಿ ಮಾನವನ ಕ್ಯಾನ್ಸರ್ ಕೋಶಗಳನ್ನು ಸೇರಿಸಲಾಯಿತು. ಆ ಕೋಶಗಳು ಇಲಿಗಳಲ್ಲಿ ಗೆಡ್ಡೆಯನ್ನು ರೂಪಿಸಿತು. ನಂತರ ಇಲಿಗಳಿಗೆ ವಿಕಿರಣ ಚಿಕಿತ್ಸೆ, ಕೀಮೋಥೆರಪಿ ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಲಾಯಿತು. ಈ ಕ್ಯಾನ್ಸರ್ ಕೋಶಗಳು ಸತ್ತಾಗ ಅವು ಕ್ರೊಮಾಟಿನ್ ಕಣಗಳೆಂದು ಕರೆಯಲ್ಪಡುವ ಸಣ್ಣ ತುಂಡುಗಳಾಗಿ ಒಡೆಯುತ್ತವೆ. ಈ ಸಣ್ಣ ತುಂಡುಗಳು ರಕ್ತದೊಂದಿಗೆ ಸೇರಿ ಆರೋಗ್ಯ ಹೊಂದಿದ ಜೀವಕೋಶಗಳನ್ನು ಪ್ರವೇಶಿಸಿದಾಗ ಕ್ಯಾನ್ಸರ್ ಬರುತ್ತದೆ ಎಂದು ತಿಳಿಸಿದರು.
ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು, ವೈದ್ಯರು ಇಲಿಗಳಿಗೆ ರೆಸ್ವೆರಾಟ್ರೊಲ್ ಮತ್ತು ತಾಮ್ರದ (R+Cu) ಪ್ರೊ-ಆಕ್ಸಿಡೆಂಟ್ ಮಾತ್ರೆಗಳನ್ನು ನೀಡಲಾಯಿತು. R+Cu ಆಮ್ಲಜನಕ ಮುಕ್ತ ಕಣಗಳನ್ನು ಉತ್ಪಾದಿಸುತ್ತದೆ, ಇದು ಕ್ರೊಮಾಟಿನ್ ಕಣಗಳನ್ನು ನಾಶಪಡಿಸುತ್ತದೆ ಎಂದು ವಿವರಿಸಿದರು.
R+Cu ಅನ್ನು ಸೇವಿಸಿದಾಗ ಹೊಟ್ಟೆಯಲ್ಲಿ ಆಮ್ಲಜನಕ ಮುಕ್ತ ಕಣಗಳನ್ನು ಉತ್ಪಾದಿಸುತ್ತದೆ. ಈ ಆಮ್ಲಜನಕ ಮುಕ್ತ ಕಣಗಳನ್ನು ಚಲಾವಣೆಯಲ್ಲಿರುವ ಕ್ರೊಮಾಟಿನ್ ಕಣಗಳನ್ನು ನಾಶಮಾಡುತ್ತವೆ ಮತ್ತು ‘ಮೆಟಾಸ್ಟೇಸ್’ಗಳನ್ನು ತಡೆಯುತ್ತವೆ. ಇದು ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕ್ಯಾನ್ಸರ್ ಕೋಶಗಳ ಚಲನೆ ತಡೆಯುತ್ತದೆ ಎಂದು ಹೇಳಿದರು.
ಜೂನ್- ಜುಲೈನಲ್ಲಿ ಲಭ್ಯ:
ಟಾಟಾ ವೈದ್ಯರು ಸುಮಾರು ಒಂದು ದಶಕದಿಂದ ಈ ಮಾತ್ರೆಯ ಮೇಲೆ ಸಂಶೋಧನೆ ಮಾಡುತ್ತಿದ್ದು ಈಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅನುಮೋದನೆಗೆ ಕಾಯತ್ತಿದ್ದಾರೆ. ಈಗಾಲೇ ಟಿಐಎಫ್‌ಆರ್ ವಿಜ್ಞಾನಿಗಳು ಈ ಮಾತ್ರೆಯನ್ನು ಅನುಮೋದಿಸಲು ಎಫ್‌ಎಸ್‌ಎಸ್‌ಎಐಗೆ ಅರ್ಜಿ ಸಲ್ಲಿಸಿದ್ದಾರೆ. ಅನುಮೋದನೆ ಪಡೆದ ನಂತರ ಜೂನ್-ಜುಲೈನಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.