ಉಡುಪಿ : ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತ ಪ್ರಕರಣಗಳು ಹೆಚ್ಚಾಗುತ್ತಿವೆ.ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಶೇ.3 ರಷ್ಟು ಕೇಸುಗಳು ಇವುಗಳಿಗೆ ಸಂಬಂಧಪಟ್ಟಂತವೇ ಆಗಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ, ಹಿರಿಯಡಕ ಸಂಸ್ಕ್ರತಿ ಸಿರಿ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ಆಸ್ಪತ್ರೆಯ ಕಮಲ್ ಎ.ಬಾಳಿಗ ಸಭಾಂಗಣದಲ್ಲಿ ನಡೆದ ವಿವಾಹ ವಿಚ್ಛೇದನ ಸಮಸ್ಯೆಗಳು – ಒಂದು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಮಾತಾಡಿದ ಮನೋವೈದ್ಯ ಡಾ.ಪಿ.ವಿ.ಭಂಡಾರಿ, ದೇಶವನ್ನು ವಿವಿಧ ರೀತಿಯಲ್ಲಿ ಕಾಡಿದ ಕೊರೋನಾ ಸೋಂಕು ಸಾಂಸಾರಿಕ ಬದುಕಿನ ಮೇಲೂ ಸಾಕಷ್ಟು ಪರಿಣಾಮ ಬೀರಿದ್ದು, ಉಡುಪಿ ಜಿಲ್ಲೆಯಲ್ಲಿ ಕಳೆದ ಸುಮಾರು 40 ದಿನಗಳಲ್ಲಿ 50 ಕ್ಕೂ ಅಧಿಕ ವಿವಾಹ ವಿಚ್ಛೇದನ ಕೇಸು ದಾಖಲಾಗಿರುವ ವರದಿ ಇದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡಕ, ಹಿರಿಯ ವಕೀಲ ದೇವರಾಜ್ ಶೆಟ್ಟಿಗಾರ್, ಉಡುಪಿ ಜಿಲ್ಲಾ ಮಹಿಳಾ ಸಂಘಗಳ ಒಕ್ಕೂಟದ ಕಾರ್ಯದರ್ಶಿ ವಸಂತಿ ರಾವ್ ಕೊರಡ್ಕಲ್, ಮನೋವೈದ್ಯ ವಿರೂಪಾಕ್ಷ ದೇವರಮನಿ ಉಪಸ್ಥಿತರಿದ್ದರು.
ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ, ಸ್ವಾಗತಿಸಿದರು. ಆಪ್ತ ಸಮಾಲೋಚಕ ನಾಗರಾಜ್ ಮೂರ್ತಿ ವಂದಿಸಿದರು. ಆಪ್ತ ಸಮಾಲೋಚಕರಾದ ಲೋಹಿತ್ ಮತ್ತು ಪಾವನ ನಿರೂಪಿಸಿದರು.