ಹೊಸದಿಲ್ಲಿ : ಲೋಕಸಭಾ ಚುನಾವಣೆ ರಾಜಕೀಯ ಪಕ್ಷಗಳ ಸಿದ್ಧತೆ ಭರದಿಂದ ನಡೆಯುತ್ತಿದೆ. ಇನ್ನು ಕೆಲವೇ ವಾರಗಳಲ್ಲಿ ಚುನಾವಣೆ ಘೋಷಣೆಯಾಗಲಿದೆ. ಇದಕ್ಕೆ ಹಾಲಿ ಅಧಿಕಾರದಲ್ಲಿರುವ ಪಕ್ಷ ಬಿಜೆಪಿ ಗುರುವಾರಹತ್ವದ ಸಭೆ ನಡೆಸಿದ್ದು, ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಪ್ರಕಟಿಸುವ ಸಾಧ್ಯತೆ ಇದೆ.
ಈಗಾಗಲೇ 100 ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು, ಘೋಷಣೆಯಷ್ಟೇ ಬಾಕಿಯಿದೆ. ಈ ಬಾರಿ ತನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡುವುದರ ಜೊತೆಗೆ ಬಿಜೆಪಿ ಹಲವು ಹಂತಗಳ ಸಮಗ್ರ ಪ್ರಕ್ರಿಯೆಯನ್ನು ಅನುಸರಿಸಿದ್ದು, ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಜನರ ಅಭಿಪ್ರಾಯದ ಜೊತೆಗೆ ಆಂತರಿಕ ಮೌಲ್ಯಮಾಪನ, ಉನ್ನತ ಮಟ್ಟದ ಚರ್ಚೆ ನಡೆಸಿರುವ ಬಿಜೆಪಿ ಬಹು ಹಂತಗಳ ಸಮಗ್ರ ಪ್ರಕ್ರಿಯೆಯನ್ನು ಅಭ್ಯರ್ಥಿಗಳ ಆಯ್ಕೆಯಲ್ಲಿ ಅನುಸರಿಸಿದೆ. ಗುರುವಾರ ತಡರಾತ್ರಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆದಿದ್ದು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ದೀರ್ಘ ಚರ್ಚೆ ನಡೆದಿದೆ. ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿ ಸಿದ್ಧತೆ ಆರಂಭಿಸಲು ಮುಂದಾಗಿದೆ.
ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ತಂತ್ರಜ್ಞಾನದ ಮೂಲಕ ಬೂತ್ ಮಟ್ಟದಿಂದಲೂ ಬಿಜೆಪಿ ಪ್ರತಿಕ್ರಿಯೆಯನ್ನು ಪಡೆದಿದೆ. ಹಾಲಿ ಸಂಸದರ ಕಾರ್ಯವೈಖರಿ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲು ನಮೋ ಆ್ಯಪ್ ಅನ್ನು ಬಿಜೆಪಿ ಬಳಸಿಕೊಂಡಿದೆ. ಅದಲ್ಲದೇ ತಮ್ಮ ವ್ಯಾಪ್ತಿಯ ಮೂವರು ಜನಪ್ರಿಯ ಬಿಜೆಪಿ ನಾಯಕರನ್ನು ಹೆಸರಿಸುವಂತೆ ಆಪ್ ಮೂಲಕವೇ ಜನರನ್ನು ಬಿಜೆಪಿ ಕೇಳಿದೆ. ಈ ಮೂಲಕ ಸ್ಥಳೀಯರ ಭಾವನೆಗಳು ಮತ್ತು ಆಕಾಂಕ್ಷೆಗಳನ್ನು ತನ್ನ ಅಭ್ಯರ್ಥಿಗಳು ಪ್ರತಿನಿಧಿಸುವುದನ್ನು ಬಿಜೆಪಿ ಖಚಿತಪಡಿಸಿಕೊಂಡಂತೆ ಕಾಣುತ್ತಿದೆ.
ಕೇಂದ್ರ ಸಚಿವರಿಗೆ ವಿವಿಧ ಲೋಕಸಭಾ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ಹಾಲಿ ಸಂಸದರ ಕಾರ್ಯವೈಖರಿಯ ಬಗ್ಗೆ ಸಮಗ್ರ ಚಿತ್ರಣ ಪಡೆಯುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಕೇಂದ್ರ ಸಚಿವರು ಮತ್ತು ಸಂಘಟನಾ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ರಾಜ್ಯ ಮಟ್ಟದ ಚುನಾವಣಾ ಸಮಿತಿ ಸಭೆಗಳಲ್ಲಿ ಕ್ರೋಢೀಕರಿಸಿ, ಅಭ್ಯರ್ಥಿಗಳ ಅಂತಿಮ ಆಯ್ಕೆ ಪ್ರಕ್ರಿಯೆಯನ್ನು ಶುರು ಮಾಡಲಾಗಿತ್ತು. ಈ ಚರ್ಚೆಗಳ ಬಳಿಕ ಪ್ರತಿ ರಾಜ್ಯದ ಪ್ರಮುಖ ನಾಯಕರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಮೊಹರು ಬೀಳುತ್ತಿದೆ.
ಗುರುವಾರ ತಡರಾತ್ರಿ ನಡೆದ ಸಭೆಯಲ್ಲಿ ಬಿಜೆಪಿ ಹೈಕಮಾಂಡ್ ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ರಣತಂತ್ರ ರೂಪಿಸಿದೆ. ಈ ಹಿನ್ನೆಲೆ ಹಲವು ಕಡೆ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದ್ದು, ರಾಜ್ಯಸಭಾ ಸದಸ್ಯರು ಮತ್ತು ಹಾಲಿ ಕೇಂದ್ರ ಸಚಿವರಾಗಿರುವ ಹಲವರನ್ನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಸೂಚಿಸಿದೆ. ಇದರಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೇರಿ ಹಲವರ ಹೆಸರುಗಳು ಇವೆ.