ಉಡುಪಿ: ಎರಡು ಬಾರಿಯ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ಪತ್ರ ಚಳುವಳಿ, ವಾಟ್ಸಾಪ್ ಸ್ಟೇಟಸ್ ಅಭಿಯಾನ ಚಾಲ್ತಿಯಲ್ಲಿರುವ ಬೆನ್ನಲ್ಲೇ, ಮತ್ತೊಂದು ಸಂಕಷ್ಟ ಎದುರಾಗಿದೆ. ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಬೈಕ್ ರ‍್ಯಾಲಿ ಆಯೋಜಿಸಲಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೋಭಾ ವಿರುದ್ದ ಚಳುವಳಿ ಜೋರಾಗಿತ್ತು, ಈಗ ಉಡುಪಿಯಲ್ಲೂ ಈ ಅಭಿಯಾನ ಆರಂಭವಾಗಿರುವುದರಿಂದ ಬಿಜೆಪಿ ಕಾರ್ಯಕರ್ತರು ಕಿರಿಕಿರಿ ಅನುಭವಿಸುವಂತಾಗಿದೆ. ಪ್ರಮುಖವಾಗಿ ಮೊಗವೀರ ಸಮುದಾಯದ ಮುಖಂಡರು ಮತ್ತು ಬಿಜೆಪಿ ಕಾರ್ಯಕರ್ತರು ನಾಳೆ ( ಮಾ 2) ಬೈಕ್ ರ‍್ಯಾಲಿಯನ್ನು ಆಯೋಜಿಸಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಮಲ್ಪೆ ಏಳೂರು ಮೊಗವೀರ ಭವನದಿಂದ ಬೈಕ್ ರ‍್ಯಾಲಿ ಆರಂಭವಾಗುವ ನಿರೀಕ್ಷೆ ಇದೆ. ಹಾಲಿ ಸಂಸದೆ ಶೋಭಾ ಕರಂದ್ಲಾಜೆ (ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ) ಕ್ರಿಯಾಶೀಲರಾಗಿಲ್ಲ ಎಂದು ಜನವರಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದ ಅಖಿಲ ಭಾರತ ಮೀನುಗಾರರ ಸಂಘದ ಕಾರ್ಯದರ್ಶಿ ಕಿಶೋರ್ ಡಿ ಸುವರ್ಣ ನೇತೃತ್ವದಲ್ಲಿ ಈ ರ‍್ಯಾಲಿ ಆಯೋಜಿಸಲಾಗಿದೆ.
ಕರಾವಳಿ ಬೈಪಾಸ್ ಮತ್ತು ಮಲ್ಪೆ ನಡುವಿನ ಮೂರೂವರೆ ಕಿಮೀ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪೂರ್ಣಗೊಳಿಸದ ಶೋಭಾ ಕರಂದ್ಲಾಜೆ ಅವರನ್ನು ಕಿಶೋರ್ ಸುವರ್ಣ ತರಾಟೆಗೆ ತೆಗೆದುಕೊಂಡಿದ್ದರು, ಇದರ ವಿಡಿಯೋ ಕಳೆದ ತಿಂಗಳು ವೈರಲ್ ಆಗಿತ್ತು. ಶನಿವಾರ ನಡೆಯುವ ಬೈಕ್ ರ‍್ಯಾಲಿ ಕಾರ್ಯಕ್ರಮದ ಪೋಸ್ಟರ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಸಂಘಟಕರ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಪೋಸ್ಟರ್‌ನಲ್ಲಿ ‘ನಿಸ್ವಾರ್ಥ’ ಪಕ್ಷದ ಕಾರ್ಯಕರ್ತರು ಈ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ ಮತ್ತು ಭಾಗವಹಿಸುವಂತೆ ಪಕ್ಷದ ಕಾರ್ಯಕರ್ತರನ್ನು ಆಹ್ವಾನಿಸಲಾಗಿದೆ.
ರ‍್ಯಾಲಿಯಲ್ಲಿ ಸುಮಾರು 200 ರಿಂದ 250 ಬೈಕ್ ಸವಾರರು ಭಾಗವಹಿಸಬಹುದು ಎಂದು ಮೂಲಗಳು ತಿಳಿಸಿವೆ