ದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತ ತಂಡದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಸ್ಪರ್ಧಿಸುತ್ತಾರೆಂದು ಮಾಧ್ಯಮ ವರದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಯುವರಾಜ್ ಸಿಂಗ್ ಅವರು ಪಂಜಾಬ್‌ನ ಗುರುದಾಸ್ ಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ವರದಿಯಾಗಿದ್ದು, ಇದನ್ನು ಯುವಿ ತಳ್ಳಿ ಹಾಕಿದ್ದಾರೆ.
ಯುವರಾಜ್ ಸಿಂಗ್ ಅವರು ಮಾರ್ಚ್ ಒಂದರಂದು (ಶುಕ್ರವಾರ) ತಮ್ಮ ಅಧಿಕೃತ ಟ್ವಿಟರ್ ಖಾತೆಯ ಪೋಸ್ಟ್ ಮೂಲಕ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶಿಸುವುದಿಲ್ಲ. ಬದಲಿಗೆ ತಮ್ಮ ಫೌಂಡೇಷನ್ ‘ಯುವಿಕೆನ್’ ಮೂಲಕ ಸಮಾಜ ಸೇವೆಯನ್ನು ಮುಂದುವರಿಸುತ್ತೇನೆ ಎಂದು ಯುವಿ ತಿಳಿಸಿದ್ದಾರೆ.
ನಾನು ರಾಜಕೀಯಕ್ಕೆ ಬರುತ್ತಿಲ್ಲ: ಯುವರಾಜ್ ಸಿಂಗ್
“ಮಾಧ್ಯಮಗಳ ವರದಿಗಳಲ್ಲಿ ಸತ್ಯವಿಲ್ಲ. ನಾನು ಲೋಕಸಭಾ ಚುನಾವಣೆಯಲ್ಲಿ ಗುರುದಾಸ್ ಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿಲ್ಲ. ನನ್ನ ಉತ್ಸಾಹವು ಜನರನ್ನ ಬೆಂಬಲಿಸುವುದು ಮತ್ತು ಸಹಾಯ ಮಾಡುವುದಾಗಿದೆ. ಅದಕ್ಕಾಗಿ ನನ್ನ ಫೌಂಡೇಶನ್ @ YOUWECAN ಮೂಲಕ ಅದನ್ನು ನಾನು ಮುಂದುವರಿಸುತ್ತೇನೆ. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬದಲಾವಣೆ ತರುವುದನ್ನು ಮುಂದುವರಿಸೋಣ,” ಎಂದು ಬರೆದುಕೊಂಡಿದ್ದಾರೆ.
ವಿಶ್ವಕಪ್ ವಿಜೇತ ಆಟಗಾರ ಯುವರಾಜ್ ಸಿಂಗ್ ಅವರು ಬಾಲಿವುಡ್ ನಟ ಸನ್ನಿ ಡಿಯೋಲ್ ಅವರು ಪ್ರತಿನಿಧಿಸುತ್ತಿರುವ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಯುವರಾಜ್ ಸಿಂಗ್ ಭೇಟಿಯಾದ ನಂತರ ಈ ಚರ್ಚೆಗಳು ಮತ್ತಷ್ಟು ಪುಷ್ಟಿ ಪಡೆದುಕೊಂಡಿದ್ದವು. ಆದರೆ ಈ ಎಲ್ಲ ವದಂತಿಗಳಿಗೆ ಯುವರಾಜ್ ಸಿಂಗ್ ತೆರೆ ಎಳೆದಿದ್ದಾರೆ.
2007 ಮತ್ತು 2011ರ ವಿಶ್ವಕಪ್ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮಾಜಿ ಆಲ್‌ರೌಂಡರ್ ಪ್ರಮುಖ ಪಾತ್ರ ವಹಿಸಿದ್ದರು.