ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಭಾರೀ ತಯಾರಿ ನಡೆಸಿರುವ ಬಿಜೆಪಿ ಶನಿವಾರ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. 16 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಿಂದ 195 ಸೀಟುಗಳಿಗೆ ಹೆಸರು ಪ್ರಕಟಿಸಿದೆ. ಪ್ರಧಾನಿ ಮೋದಿ ಸೇರಿದಂತೆ 34 ಸಚಿವರು ಕಣದಲ್ಲಿದ್ದಾರೆ.
ಮೊದಲ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಕ್ಷೇತ್ರದ ಅಭ್ಯರ್ಥಿಯ ಪಟ್ಟಿ ಪ್ರಕಟ ಮಾಡಿಲ್ಲ.
ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಸ್ಪರ್ಧಿಸಲಿದ್ದಾರೆ. ಗಾಂಧಿನಗರದಿಂದ ಅಮಿತ್ ಶಾ, ಲಖನೌದಿಂದ ರಾಜನಾಥ ಸಿಂಗ್ ಸ್ಪರ್ಧಿಸುತ್ತಿದ್ದಾರೆ. ಅಮೇಥಿಯಿಂದ ಸ್ಮೃತಿ ಇರಾನಿ, ಕೋಟಾದಿಂದ ಓಂ ಬಿರ್ಲಾ, ಮಾಜಿ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಗೆ ಟಿಕೆಟ್ ನೀಡಲಾಗಿದ್ದು ನವದೆಹಲಿಯಿಂದ ಅವರು ಸ್ಪರ್ಧಿಸುತ್ತಿದ್ದಾರೆ.
ಉತ್ತರ ಪ್ರದೇಶ 51, ಪಶ್ಚಿಮ ಬಂಗಾಳ 20, ಮಧ್ಯಪ್ರದೇಶ 24, ಗುಜರಾತ್ ಮತ್ತು ರಾಜಸ್ಥಾನದಿಂದ ತಲಾ 15, ಕೇರಳದ 12, ತೆಲಂಗಾಣದ 9, ಅಸ್ಸಾಂನ 11, ಜಾರ್ಖಂಡ್ ಮತ್ತು ಛತ್ತೀಸ್‌ಗಢದಿಂದ ತಲಾ 11 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ದೆಹಲಿಯ 5, ಜಮ್ಮು ಮತ್ತು ಕಾಶ್ಮೀರದಿಂದ 2, ಉತ್ತರಾಖಂಡದಿಂದ 3, ಅರುಣಾಚಲ ಪ್ರದೇಶದಿಂದ 2 ಮತ್ತು ಗೋವಾ, ತ್ರಿಪುರಾ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ದಮನ್ ಮತ್ತು ದಿಯುನಿಂದ ತಲಾ 1 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ.
ಮೊದಲ ಪಟ್ಟಿಯಲ್ಲಿ 28 ಮಹಿಳಾ ಅಭ್ಯರ್ಥಿಗಳು, 47 ಯುವಕರು, ಪರಿಶಿಷ್ಟ ಜಾತಿಯಿಂದ 27, ಪರಿಶಿಷ್ಟ ಪಂಗಡದಿಂದ 18 ಮತ್ತು 57 ಒಬಿಸಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.