ಬೆಂಗಳೂರು: ಕಳೆದ ಶುಕ್ರವಾರ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ(NIA) ವರ್ಗಾಯಿಸಲಾಗಿದೆ. ಬಾಂಬ್ ಸ್ಫೋಟ ಘಟನೆ ಸಂಬಂಧ ಎನ್ ಐಎ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ನೀಡಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣವನ್ನು UAPA ಅಡಿ ಬೆಂಗಳೂರಿನ ಹೆಚ್ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆಯನ್ನು ಬೆಂಗಳೂರು ಪೊಲೀಸರು ಸಿಸಿಬಿಗೆ ವರ್ಗಾಯಿಸಿದ್ದರು.ಇದೀಗ ಪ್ರಕರಣದ ಗಂಭೀರತೆಯನ್ನು ಅರಿತು ಎನ್ ಐಎ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿಕೊಂಡಿದೆ.
ಬಾಂಬ್ ಸ್ಫೋಟ ಸಂಭವಿಸಿದ ಬೆಂಗಳೂರಿನ ರಾಮೇಶ್ವರಂ ಕೆಫೆಗೆ ಭಾನುವಾರ ಭೇಟಿ ನೀಡಿದ ಸಿಸಿಬಿ ಪೊಲೀಸರು ಸ್ಥಳ ಮಹಜರು ನಡೆಸಿದ್ದರು. ಸಿಸಿಬಿ ತನಿಖಾಧಿಕಾರಿ ನವೀನ್ ಕುಲಕರ್ಣಿ ಮತ್ತು ಅವರ ತಂಡ, ರಾಮೇಶ್ವರಂ ಕೆಫೆ ಮ್ಯಾನೇಜರ್, ಸಿಬ್ಬಂದಿ ಸಮ್ಮುಖದಲ್ಲಿ ಮಹಜರು ನಡೆಸಿ. ಶಂಕಿತ ಬಾಂಬರ್ ಕೆಫೆಗೆ ಪ್ರವೇಶಿಸಿದ ಸ್ಥಳ, ಓಡಾಡಿದ್ದ ಸ್ಥಳದಲ್ಲಿ ಪರಿಶೀಲನೆ ಮಾಡಿದ್ದರು. ನಾಲ್ವರು ಶಂಕಿತರನ್ನು ಆಡುಗೋಡಿ ತಾಂತ್ರಿಕ ಕೊಠಡಿಗೆ ಕರೆತಂದು ವಿಚಾರಣೆ ನಡೆಸಲಾಗಿತ್ತು.
10 ಮಂದಿಗೆ ಗಾಯ: ಮಾರ್ಚ್ 1 ರಂದು ಪೂರ್ವ ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿ ಹತ್ತು ಜನರು ಗಾಯಗೊಂಡಿದ್ದರು. ಟೋಪಿ, ಮುಖವಾಡ ಮತ್ತು ಕನ್ನಡಕ ಧರಿಸಿರುವ ವ್ಯಕ್ತಿ ಪ್ರಕರಣದ ಪ್ರಮುಖ ಶಂಕಿತನಾಗಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.