ಮಂಗಳೂರು: ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದುಕೊಂಡೇ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿದೆ. ಕಡಬ ತಾಲೂಕಿನ ಎಣ್ಮೂರು ಗ್ರಾಮದ ಕುಲಾಯಿತೋಡು ಎಂಬಲ್ಲಿ ಎನ್ಐಎ ದಾಳಿ ನಡೆಸಿದೆ. ದಾಳಿ ವೇಳೆ ಕೇರಳದ ಇಡುಕ್ಕಿ ಮೂಲದ ಬಿಜು ಅಬ್ರಹಾಂ ಎಂಬವನ ವಿಚಾರಣೆ ನಡೆಸಲಾಗಿದೆ.
ಬಾಡಿಗೆ ಮನೆಯಲ್ಲಿ ವಾಸವಿದ್ದ ಬಿಜು ಅಬ್ರಹಾಂ, ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದಾರೆ. ನಾಲ್ಕು ದಿನದ ಹಿಂದಷ್ಟೇ ಎಡಮಂಗಲದಿಂದ ಕುಲಾಯಿತೋಡು ಎಂಬಲ್ಲಿಗೆ ಶಿಫ್ಟ್ ಆಗಿದ್ದರು. ಸದ್ಯ ದಾಳಿ ನಡೆಸಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇನ್ನು ಏಳು ರಾಜ್ಯಗಳ 17 ಸ್ಥಳಗಳಲ್ಲಿ ಎನ್ಐಎ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಲಷ್ಕರ್-ಏ-ತೊಯ್ಬಾ (ಎಲ್ಇಟಿ) ಸಂಘಟನೆಯ ಭಯೋತ್ಪಾದಕ ನಸೀರ್, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದುಕೊಂಡೇ ಹಲವರನ್ನ ತೀವ್ರಗಾಮಿಗಳನ್ನಾಗಿ ಮಾಡಿ, ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಪ್ರಚೋದಿಸಿದ್ದಾನೆ ಎಂಬ ಆರೋಪವಿದೆ. ಸದ್ಯ ಕಡಬ ತಾಲೂಕಿನ ಎಣ್ಮೂರು ಗ್ರಾಮದ ಕುಲಾಯಿತೋಡು ಎಂಬಲ್ಲಿ ಎನ್ಐಎ ದಾಳಿ ನಡೆಸಿ ಕೇರಳದ ಇಡುಕ್ಕಿ ಮೂಲದ ಬಿಜು ಅಬ್ರಹಾಂ ವಿಚಾರಣೆ ನಡೆಸಿದೆ.