ಪ್ಯಾರಸಿಟಮಲ್ ಮಾತ್ರೆ ಹಾಗೂ ಟಾನಿಕ್ಗಳು ವಿಶ್ವಾದ್ಯಂತ ತುಂಬಾನೇ ಜನಪ್ರಿಯ. ಅತ್ಯಂತ ವೇಗವಾಗಿ ನೋವನ್ನು ನಿವಾರಿಸುವ ಈ ಔಷಧ, ಪರಿಣಾಮಕಾರಿ ನೋವು ನಿವಾರಕವಾಗಿ ಜನ ಮನ ಗೆದ್ದಿದೆ. ಆದರೆ, ಔಷಧವನ್ನು ಆಗಾಗ ಬಳಕೆ ಮಾಡುತ್ತಲೇ ಇದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಮುನ್ನೆಚ್ಚರಿಕೆಯನ್ನು ತಜ್ಞ ವೈದ್ಯರು ನೀಡಿದ್ದಾರೆ.
ಸ್ಕಾಟ್ಲೆಂಡ್ ದೇಶದ ಎಡಿನ್ಬರ್ಗ್ ವಿಶ್ವ ವಿದ್ಯಾಲಯದ ತಜ್ಞರು ನಡೆಸಿರುವ ಹೊಸ ಸಂಶೋಧನೆಯಲ್ಲಿ ಪ್ಯಾರಸಿಟಮಲ್ ಔಷಧದ ಗಂಭೀರ ಅಡ್ಡ ಪರಿಣಾಮಗಳ ಕುರಿತಾದ ವಿವರಣೆ ಇದೆ. ಇಲಿಗಳ ಮೇಲೆ ಪ್ಯಾರಸಿಟಮಾಲ್ ಔಷಧವನ್ನು ಪ್ರಯೋಗ ಮಾಡಿ ಪರಿಶೀಲನೆ ನಡೆಸಿರುವ ವೈದ್ಯರು, ಯಕೃತ್ (ಲಿವರ್) ಹಾನಿ ಆಗುವ ಸಾಧ್ಯತೆಯನ್ನು ಖಚಿತಪಡಿಸಿದ್ದಾರೆ.
ಈ ಸಂಶೋಧನೆಯ ಮೂಲಕ ಮುಂದಿನ ದಿನಗಳಲ್ಲಿ ವೈದ್ಯರು ರೋಗಿಗಳಿಗೆ ಪ್ಯಾರಸಿಟಮಾಲ್ ಔಷಧವನ್ನು ತೆಗೆದುಕೊಳ್ಳಲು ಸಲಹೆ ನೀಡುವ ಮುನ್ನ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನೂ ಸೂಚಿಸಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದ್ದಾರೆ. ಅಗತ್ಯ ಪ್ರಮಾಣಕ್ಕೂ ಹೆಚ್ಚಿನ ಪ್ಯಾರಸಿಟಮಾಲ್ ಔಷಧ ಸೇವನೆ, ಪದೇ ಪದೇ ಪ್ಯಾರಸಿಟಮಾಲ್ ಸೇವನೆ ಹಾಗೂ ಪ್ಯಾರಸಿಟಮಾಲ್ ಓವರ್ ಡೋಸ್ನಿಂದ ಎದುರಾಗುವ ಅಡ್ಡ ಪರಿಣಾಮಗಳನ್ನೂ ತಜ್ಞರು ಪಟ್ಟಿ ಮಾಡಿದ್ದಾರೆ.
ದಿನಕ್ಕೆ ಎಷ್ಟು ಸೇವನೆ ಮಾಡಬಹುದು ?: ತಜ್ಞ ವೈದ್ಯರ ಪ್ರಕಾರ ಯಾವುದೇ ವಯಸ್ಕ ರೋಗಿ ತೀವ್ರ ನೋವಿನಿಂದ ಬಳಲುತ್ತಿರುವ ಸನ್ನಿವೇಶದಲ್ಲಿ ಅತಿ ಹೆಚ್ಚು ಎಂದರೆ ಒಂದು ದಿನಕ್ಕೆ ಗರಿಷ್ಠ 4 ಗ್ರಾಂ ಪ್ಯಾರಸಿಟಮಾಲ್ ಔಷಧವನ್ನು ಮಾತ್ರ ಸೇವನೆ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ.
ಪ್ಯಾರಸಿಟಮಾಲ್ ಔಷಧವನ್ನು ಮಾತ್ರೆ ಅಥವಾ ಟಾನಿಕ್ ಸೇರಿದಂತೆ ಯಾವುದೇ ಸ್ವರೂಪದಲ್ಲಿ ಸ್ವೀಕರಿಸಿದರೂ ಅದು ಮೊದಲಿಗೆ ಮಾನವನ ಲಿವರ್ನ ಜೀವ ಕೋಶಗಳ ಮೇಲೆ ದಾಳಿ ನಡೆಸುತ್ತವೆ. ಜೊತೆಯಲ್ಲೇ ಲಿವರ್ನ ಜೊತೆ ನಂಟು ಹೊಂದಿರುವ ದೇಹದ ಇನ್ನಿತರ ಅಂಗಗಳ ಜೀವ ಕೋಶಗಳನ್ನೂ ನಾಶ ಮಾಡಬಲ್ಲ ಶಕ್ತಿ ಹೊಂದಿದೆ ಎಂದು ಸಂಶೋಧನೆಗಳು ಹೇಳಿವೆ. ಜೊತೆಯಲ್ಲೇ ಪ್ಯಾರಸಿಟಮಾಲ್ ರಾಸಾಯನಿಕವು ಜೀವ ಕೋಶಗಳು ಸುಗಮವಾಗಿ ಕಾರ್ಯ ನಿರ್ವಹಿಸದಂತೆ ಮಾಡುತ್ತವೆ. ಹೀಗಾಗಿ, ಅಂಗಾಂಗವೇ ಸಾಯುವಂತಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಎಡಿನ್ಬರ್ಗ್ ವಿಶ್ವ ವಿದ್ಯಾಲಯವು ಇದೇ ಮೊದಲ ಬಾರಿಗೆ ಪ್ಯಾರಸಿಟಮಾಲ್ ರಾಸಾಯನಿಕ ಔಷಧ ಹಾಗೂ ಲಿವರ್ ಮೇಲೆ ಇದರ ವಿಷಕಾರಿ ಪರಿಣಾಮದ ಕುರಿತಾಗಿ ಅಧ್ಯಯನ ವರದಿ ಪ್ರಕಟಿಸಿದೆ. ಪ್ಯಾರಸಿಟಮಾಲ್ ಪದೇ ಪದೇ ವಿಪರೀತ ಪ್ರಮಾಣದಲ್ಲಿ ಸೇವಿಸಿದಾಗ ಹೆಪಟೈಟೀಸ್, ಸೋರಿಯಾಸಿಸ್ ಹಾಗೂ ಕ್ಯಾನ್ಸರ್ ರೀತಿಯ ಗಂಭೀರ ಸ್ವರೂಪದ ರೋಗ ಲಕ್ಷಣಗಳು ಕಂಡು ಬರಬಹುದು ಎಂಬ ಎಚ್ಚರಿಕೆಯನ್ನೂ ವರದಿ ನೀಡಿದೆ. ಎಡಿನ್ ಬರ್ಗ್ ವಿವಿ ಸಂಶೋಧಕರಿಗೆ ಓಸ್ಲೋ ಹಾಗೂ ಸ್ಕಾಟಿಷ್ ರಾಷ್ಟ್ರೀಯ ತಜ್ಞ ವೈದ್ಯರೂ ಕೂಡಾ ಸಂಶೋಧನೆ ನಡೆಸಲು ನೆರವಾಗಿದ್ದರು. ಈ ಸಂಬಂಧ ವೈಜ್ಞಾನಿಕ ವರದಿ ಕೂಡಾ ಪ್ರಕಟವಾಗಿದೆ.