ಕಲಬುರಗಿ: ಅತ್ತೆ ಸೊಸೆಯರ ಜಗಳ ಇದ್ದಿದ್ದೇ. ಈ ಜಗಳ ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲು ಹತ್ತುವುದೂ ಹೊಸತಲ್ಲ. ಆದರೆ ಅತ್ತೆ ಸಾಯಲಿ ಎಂದು ಸೊಸೆಯೊಬ್ಬರು ನೋಟಿನ ಮೇಲೆ ಬರೆದು ದೇವಸ್ಥಾನದ ಹುಂಡಿಯಲ್ಲಿ ಹಾಕಿದ್ದಾರೆನ್ನಲಾದ ನೋಟು ಈಗ ಎಲ್ಲ ಕಡೆ ವೈರಲ್ ಆಗಿದೆ.
ದೇವಸ್ಥಾನದಲ್ಲಿ ದೇವರ ಹುಂಡಿಗೆ ಹಣದ ಜತೆಗೆ ಚೀಟಿಗಳನ್ನು ಬರೆದು ಹಾಕುವುದು ಆಗಾಗ ಹುಂಡಿ ಎಣಿಕೆ ಆಗುವಾಗ ಬೆಳೆಕಿಗೆ ಬರುತ್ತಿರುತ್ತದೆ. ತಮ್ಮ ಬಯಕೆ ಈಡೇರಲಿ ಎಂದು ಕೆಲವರು ಚೀಟಿಯಲ್ಲಿ ಬರೆದು ಹಾಕಿದರೆ, ನೋಟಿನಲ್ಲಿ ಬರೆದು ಹಾರಿ ಪ್ರಾರ್ಥಿಸುತ್ತಾರೆ. ಕೆಲವರು ಪ್ರೀತಿ ಫಲಿಸಲಿ ಎಂದು ದೇವರ ಮೊರೆ ಹೋದರೆ, ಇನ್ನೂ ಕೆಲವರು ತಮ್ಮ ಮನೆಯವರು, ಮಕ್ಕಳು ಚನ್ನಾಗಿರಲಿ ಎಂದು ಕೋರುತ್ತಾರೆ. ಪರೀಕ್ಷೆಯಲ್ಲಿ ಪಾಸಾಗಲಿ, ಬಯಸಿದ ಉದ್ಯೋಗ ಸಿಗಲಿ, ಚುನಾವಣೆಯಲ್ಲಿ ಜಯ ಸಿಗಲಿ, ಹೀಗೆ ಹತ್ತು ಹಲವು ಬೇಡಿಕೆಗಳು ಓದಲು ಸಿಗುತ್ತದೆ. ಇಲ್ಯಾರೋ “ನನ್ನ ಅತ್ತೆ ಆದಷ್ಟು ಬೇಗ ಸಾಯಬೇಕು ಸ್ವಾಮಿ’ ಎಂಬ ಬೇಡಿಕೆಯಿಟ್ಟಿರುವುದು ಈಗ ಸುದ್ದಿಯಲ್ಲಿದೆ.
ದೇವಸ್ಥಾನ ಒಂದರಲ್ಲಿನ ಹುಂಡಿಯಲ್ಲಿ ಈ ರೀತಿ ಬರೆದು ಹಾಕಿರುವ ನೋಟು ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಸುತ್ತಿರುವಾಗ ಈ ನೋಟು ಪತ್ತೆಯಾಗಿದೆ. ಆದರೆ, ಯಾವ ದೇವಸ್ಥಾನದ ಹುಂಡಿಯಲ್ಲಿ ಈ ರೀತಿ ಹಾಕಿದ್ದಾರೆ ಎಂಬುದು ಇಲ್ಲಿವರೆಗೂ ಸ್ಪಷ್ಟವಾಗಿಲ್ಲ.
ಈ ನೋಟು ದೇವಸ್ಥಾನದ ಹುಂಡಿಯಲ್ಲಿ ಸಿಕ್ಕಿದ್ದು ಹೌದೋ ಅಲ್ಲವೋ, ಅಥವಾ ಯಾರಾದರೂ ಕಿಡಿಗೇಡಿಗಳು ಬರೆದು ವೈರಲ್ ಮಾಡಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ.
ನೋಟಿನ ಮೇಲೆ ಬರೆಯುವ ಹಾಗಿಲ್ಲ
ಆರ್‌ಬಿಐ ನಿಯಮಗಳ ಪ್ರಕಾರ ನೋಟಿನ ಮೇಲೆ ಬರೆಯುವುದನ್ನು ನಿಷೇಧಿಸಲಾಗಿದೆ. ಹಿಂದೆಲ್ಲಾ ಬೇಕಾಬಿಟ್ಟಿ ಬರೆಯಲಾಗುತ್ತಿತ್ತು. ಈಗ ಆರ್‌ಬಿಐ ಸ್ಪಷ್ಟ ನಿರ್ದೇಶನ ಇರುವುದರಿಂದ ಬರೆಯುವ ಹಾಗಿಲ್ಲ. ಒಂದು ವೇಳೆ ಅಂತಹ ನೋಟುಗಳಲ್ಲಿ ಸಿಕ್ಕಲ್ಲಿ ನೇರವಾಗಿ ಆರ್ ಬಿಐ ಕಚೇರಿಗೆ ಅಥವಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು.