ಮುಂಬೈ: ನಮ್ಮನ್ನು ದಿಗಿಲುಗೊಳಿಸುವ ದೃಶ್ಯಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಕೊರತೆ ಇಲ್ಲ. ಪ್ರತಿದಿನ ಇಂತಹ ಒಂದಲ್ಲ ಒಂದು ದೃಶ್ಯಗಳು ನಮಗೆ ಕಾಣಸಿಗುತ್ತವೆ. ಇದು ಕೂಡಾ ಅದೇ ಸಾಲಿಗೆ ಸೇರುವಂತಹ ದೃಶ್ಯ. ಇಲ್ಲೊಬ್ಬ ಬಾಲಕ ಪವಾಡ ಸದೃಶ್ಯ ರೀತಿಯಲ್ಲಿ ಚಿರತೆಯಿಂದ ಪಾರಾಗಿದ್ದಾನೆ. ತ್ವರಿತವಾಗಿ ಮನೆಯಿಂದ ಹೊರಗೆ ಓಡುವ ಮೂಲಕ ಈ ಬಾಲಕ ಜೀವ ಉಳಿಸಿಕೊಂಡಿದ್ದಾನೆ.
ಮಹಾರಾಷ್ಟ್ರದ ನಾಸಿಕ ಮೂಲದ ಬಾಲಕ ಮನೆಯ ಸೋಫಾದಲ್ಲಿ ಮೊಬೈಲ್‌ನಲ್ಲಿ ಆಟವಾಡುತ್ತಿರುತ್ತಾನೆ. ಈ ವೇಳೆ ಚಿರತೆಯೊಂದು ಏಕಾಏಕಿ ಮನೆಯೊಳಗೆ ನುಗ್ಗಿದೆ. ಆದರೆ ಬಾಲಕ ಭಯಗೊಂಡು ಕಿರುಚಾಡಲಿಲ್ಲ. ಬದಲಾಗಿ ನಾಜೂಕಾಗಿ ಆ ಪರಿಸ್ಥಿತಿಯನ್ನು ನಿಭಾಯಿಸಿದ್ದಾನೆ. ಇದರ ಸಿಸಿಟಿವಿ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ವೀಡಿಯೋದಲ್ಲೇನಿದೆ..?: ಮನೆಯ ಮುಂದಿನ ಬಾಗಿಲು ಓಪನ್ ಇದ್ದು, ಬಾಲಕ ಒಳಗಡೆ ಸೋಫಾದಲ್ಲಿ ಮೊಬೈಲ್‌ನಲ್ಲಿ ಆಟವಾಡುತ್ತಾ ಕುಳಿತಿದ್ದಾನೆ. ಈ ಸಂದರ್ಭದಲ್ಲಿ ಚಿರತೆಯೊಂದು ಮನೆಯೊಳಗೆ ಎಂಟ್ರಿ ಕೊಟ್ಟಿದೆ. ಚಿರತೆ ಕೂಡ ಬಾಲಕನನ್ನು ಗಮನಿಸಿಲ್ಲ. ಇತ್ತ ಬಾಲಕ ಚಿರತೆ ಮುಂದೆ ಚಲಿಸುತ್ತಿದ್ದಂತೆಯೇ ಸೋಫಾದಿಂದ ಮೆಲ್ಲನೆ ಇಳಿದು ಬಾಗಿಲು ಹಾಕಿಕೊಂಡು ಹೊರಗಡೆ ಓಡಿದ್ದಾನೆ. ಈ ಎಲ್ಲಾ ದೃಶ್ಯ ಮನೆಯ ಸಿಸಿಟಿಚಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಾಲಕನ ಧೈರ್ಯವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆ ಮಾಲೆಗಾಂವ್‌ನಲ್ಲಿ ನಡೆದಿದೆ. 12 ವರ್ಷದ ಮೋಹಿತ್ ಅಹಿರೆ ಆಟ ಆಡುತ್ತಿದ್ದಾಗ ಚಿರತೆ ಮನೆಯೊಳಗೆ ಪ್ರವೇಶಿಸಿತು. ಈ ವೇಳೆ ನಡೆದ ಘಟನೆಯನ್ನು ಬಾಲಕ ತನ್ನ ತಂದೆಗೆ ವಿವರಿಸಿದ್ದಾನೆ. ಅಬಳಿಕ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.