ಟೆಸ್ಟ್…ಏಕದಿನ…ಟಿ20…ಐಸಿಸಿಯ ಮೂರು ಸ್ವರೂಪ ಕ್ರಿಕೆಟ್ ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ಮೂಲಕ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ. ಇದರೊಂದಿಗೆ ಸಾಧನೆಗೈದ ವಿಶ್ವದ 2ನೇ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಇಂತಹದೊಂದು ದಾಖಲೆಯನ್ನು ಸೌತ್ ಆಫ್ರಿಕಾ ನಿರ್ಮಿಸಿತ್ತು.
ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯ ಗೆದ್ದು 4-1ರಲ್ಲಿ ಟೆಸ್ಟ್ ಸರಣಿ ಕೈವಶ ಮಾಡಿಕೊಂಡ ಭಾರತ ತಂಡ ಇದೀಗ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲೂ ಅಗ್ರ ಸ್ಥಾನಕ್ಕೇರಿದ್ದು, ಆ ಮೂಲಕ ಎಲ್ಲ ಮೂರೂ ಮಾದರಿಯ ಕ್ರಿಕೆಟ್ ನಲ್ಲಿ ನಂಬರ್ 1 ಸ್ಥಾನಕ್ಕೇರಿದೆ.
ಈ ಪಟ್ಟಿಯಲ್ಲಿ ಪ್ರಬಲ ಆಸ್ಟೇಲಿಯಾ ತಂಡವನ್ನು ಹಿಂದಿಕ್ಕಿರುವ ರೋಹಿತ್ ಶರ್ಮಾ ಬಳಗ, ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಭಾರತ ಈಗ 122 ರೇಟಿಂಗ್ ಪಾಯಿಂಟ್ ಹೊಂದಿದ್ದು, 117 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಆಸ್ಟ್ರೇಲಿಯಾ ಎರಡನೇ ಸ್ಥಾನಕ್ಕೆ ಕುಸಿದಿದೆ. ಮತ್ತೊಂದೆಡೆ ಭಾರತ ವಿರುದ್ಧದ ಸರಣಿಯಲ್ಲಿ ಹೀನಾಯ ಸೋಲು ಕಂಡಿರುವ ಇಂಗ್ಲೆಂಡ್ ಮೂರನೇ ಸ್ಥಾನದಲ್ಲಿ ಮುಂದುವರೆದಿದ್ದು, ಆ ತಂಡ 111 ರೇಟಿಂಗ್ ಪಾಯಿಂಟ್ ಹೊಂದಿದೆ.
ಪ್ರಸ್ತುತ ಕ್ರೈಸ್ಟ್‌ಚರ್ಚ್‌ನಲ್ಲಿ ಸಾಗುತ್ತಿರುವ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವಣ ಪಂದ್ಯದ ಫಲಿತಾಂಶ ಏನೇ ಬಂದರೂ ಭಾರತವೇ ಅಗ್ರಸ್ಥಾನದಲ್ಲಿ ಉಳಿದುಕೊಳ್ಳಲಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.
ಏಕದಿನ ಹಾಗೂ ಟ್ವೆಂಟಿ-20 ರ‍್ಯಾಂಕಿಂಗ್ ಪಟ್ಟಿಯಲ್ಲೂ ಭಾರತವೇ ಅಗ್ರಸ್ಥಾನದಲ್ಲಿದ್ದು, ಏಕದಿನದಲ್ಲಿ ಭಾರತ 121 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. 118 ರೇಟಿಂಗ್ ಪಾಯಿಂಟ್ ಗಳನ್ನು ಹೊಂದಿರುವ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಇನ್ನು ಚುಟುಕು ಕ್ರಿಕೆಟ್‌ನಲ್ಲಿ ಭಾರತ 266 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, 256 ರೇಟಿಂಗ್ ಹೊಂದಿರುವ ಇಂಗ್ಲೆಂಡ್ ಹಾಗೂ 255 ರೇಟಿಂಗ್ ಹೊಂದಿರುವ ಆಸ್ಟ್ರೇಲಿಯಾ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.