ದೆಹಲಿ: ಒಂದು ವೇಳೆ ನಿಮ್ಮ ಪತಿ ಪ್ರಧಾನಿ ನರೇಂದ್ರ ಮೋದಿ ಜಪ ಮಾಡುತ್ತಿದ್ದರೆ ಅವರಿಗೆ ಊಟ ನೀಡಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕರೆ ನೀಡಿದ್ದಾರೆ.
ದೆಹಲಿಯಲ್ಲಿ ಶನಿವಾರ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ‘ಮಹಿಳಾ ಸಮ್ಮಾನ್ ಸಮಾರೋಹ’ ಎಂಬ ಟೌನ್‌ಹಾಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಸಂಚಾಲಕ ಕೇಜ್ರಿವಾಲ್, “ಅನೇಕ ವ್ಯಕ್ತಿಗಳು ಪ್ರಧಾನಿ ಮೋದಿ ಅವರ ಹೆಸರನ್ನು ಜಪಿಸುತ್ತಿದ್ದಾರೆ. ಆದರೆ ನೀವು ಅದನ್ನು ಸರಿಪಡಿಸಬೇಕು. ನಿಮ್ಮ ಗಂಡ ಮೋದಿ ಹೆಸರನ್ನು ಪಠಿಸಿದರೆ, ನಿಮಗೆ ಊಟ ಹಾಕುವುದಿಲ್ಲ ಎಂದು ಅವರಿಗೆ ಹೇಳಿ” ಎಂದು ಕರೆ ಕೊಟ್ಟಿದ್ದಾರೆ.
18 ವರ್ಷ ಮೇಲಿನ ಎಲ್ಲಾ ಮಹಿಳೆಯರಿಗೂ ಮಾಸಿಕ 1 ಸಾವಿರ ರೂಪಾಯಿ ಹಣ ಒದಗಿಸುವ ಯೋಜನೆಯನ್ನು 2024- 25ನೇ ಸಾಲಿನ ದಿಲ್ಲಿ ಬಜೆಟ್‌ನಲ್ಲಿ ಸರ್ಕಾರ ಘೋಷಣೆ ಮಾಡಿದ ಬಳಿಕ ಮಹಿಳೆಯರ ಜತೆ ಸಂವಾದ ನಡೆಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಮ್ಮನ್ನು ಹಾಗೂ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುತ್ತೇವೆ ಎಂದು ತಮ್ಮ ಮೇಲೆ ಕುಟುಂಬದ ಸದಸ್ಯರಿಂದ ಆಣೆ ಪ್ರಮಾಣ ಮಾಡಿಸಿಕೊಳ್ಳುವಂತೆ ಕೂಡ ಮಹಿಳೆಯರಿಗೆ ಕೇಜ್ರಿವಾಲ್ ಸಲಹೆ ನೀಡಿದ್ದಾರೆ.
ಹಾಗೆಯೇ, ಬಿಜೆಪಿಯನ್ನು ಬೆಂಬಲಿಸುವ ಇತರೆ ಮಹಿಳೆಯರಿಗೆ, “ನಿಮ್ಮ ಜತೆ ನಿಲ್ಲುವುದು ನಿಮ್ಮ ಸಹೋದರ ಕೇಜ್ರಿವಾಲ್ ಮಾತ್ರ” ಎಂಬುದನ್ನು ಮನವರಿಕೆ ಮಾಡಿಸಿ” ಎಂದೂ ಮನವಿ ಮಾಡಿದ್ದಾರೆ.