ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಎಲ್ಲ ಪಕ್ಷಗಳು ತಯಾರಿಯಲ್ಲಿವೆ. ಸದ್ಯ ರಾಷ್ಟ್ರೀಯ ಮಾಧ್ಯಮಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸುತ್ತಿದ್ದು, ಈಗ ಎಬಿಪಿ ನ್ಯೂಸ್-ಸಿ ವೋಟರ್ ನಡೆಸಿದ ಸಮೀಕ್ಷೆ ಫಲಿತಾಂಶ ಬಹಿರಂಗಗೊಂಡಿದೆ.
ಈ ಸಮೀಕ್ಷೆಯಲ್ಲಿ ಕರ್ನಾಟಕವು ಬಿಜೆಪಿ ನೇತೃತ್ವದ ಎನ್‌ಡಿಎ ಪಾಲಾಗಲಿದೆ. ಕರ್ನಾಟಕದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿದ್ದು, ಈ ಪೈಕಿ ಎನ್‌ಡಿಎ 23 ಮತ್ತು ಕಾಂಗ್ರೆಸ್ 5 ಸೀಟುಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ಶೇ.42 ಮತ ಪಡೆದರೆ, ಎನ್‌ಡಿಎ ಶೇ.53 ಮತಗಳನ್ನು ಪಡೆಯುವ ಅಂದಾಜಿಸಿದೆ.
2019ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ಕೇವಲ 2 ಸ್ಥಾನಗಳನ್ನು ಗೆದ್ದಿದ್ದವು ಮತ್ತು ಬಿಜೆಪಿ ಏಕಾಂಗಿಯಾಗಿ 25 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿತ್ತು. ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಹಾಗಾಗಿ ಬಿಜೆಪಿ-ಜೆಡಿಎಸ್ ಒಟ್ಟಾರೆಯಾಗಿ ಕಳೆದ ಬಾರಿ ಬಿಜೆಪಿ ಗೆದ್ದಿದ್ದ ಸೀಟುಗಳಷ್ಟೇ ಈ ಬಾರಿ ಗೆಲ್ಲಲಿವೆ. ಮತ್ತೂಂದೆಡೆ ಕಾಂಗ್ರೆಸ್ ಒಂದು ಸೀಟಿ ನಿಂದ ಐದು ಸೀಟುಗಳವರೆಗೆ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ.
ರಾಜಸ್ಥಾನ, ಗುಜರಾತ್, ಅಸ್ಸಾಂ ಮತ್ತು ಹರಿಯಾಣದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬಹುದು ಎಂದು ಊಹಿಸಲಾಗಿದೆ. ಹಾಗೆಯೇ ಕೇರಳದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಮುಂದುವರಿಸಲಿದ್ದರೆ, ಈಶಾನ್ಯ ಭಾರತದಲ್ಲಿ ಬಿಜೆಪಿ ಹೆಚ್ಚಿನ ಸೀಟು ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ.