ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ದೂರು ನೀಡಿರುವ ಮಹಿಳೆ ಮಾನಸಿಕ ಅಸ್ವಸ್ಥೆ ಎಂಬ ಮಾಹಿತಿ ನಮಗೆ ಸಿಕ್ಕಿದ್ದು, ತನಿಖೆಯ ನಂತರವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ. ಇದೊಂದು ಸೂಕ್ಷ್ಮ ವಿಚಾರ. ಇದು ಹಿರಿಯ ರಾಜಕಾರಣಿಯಾಗಿರುವ ಮಾಜಿ ಸಿಎಂಗೆ ಸಂಬಂಧಿಸಿದ್ದು. ಪೊಲೀಸರು ದೂರು ತೆಗೆದುಕೊಂಡು ತನಿಖೆ ಆರಂಭಿಸಿದ್ದಾರೆ, ತನಿಖೆ ಪೂರ್ಣಗೊಳ್ಳುವವರೆಗೆ, ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತದೆ ಎಂದು ಗೃಹಸಚಿವ ಡಾ.ಜಿಮ ಪರಮೇಶ್ವರ್ ಹೇಳಿದ್ದಾರೆ.
ಯಡಿಯೂರಪ್ಪ ವಿರುದ್ಧ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಾಗಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪನವರ ವಿರುದ್ಧ ನಿನ್ನೆ ರಾತ್ರಿ ಮಹಿಳೆ ಕೈಬರಹದ ಬದಲಾಗಿ ಟೈಪ್ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಇಂದಿನಿಂದ ತನಿಖೆ ನಡೆಸುತ್ತಾರೆ. ಇದೊಂದು ಸೂಕ್ಷ್ಮ ವಿಚಾರವಾಗಿರುವುದರಿಂದ ಗೃಹ ಇಲಾಖೆ ಸಂಪೂರ್ಣ ಮಾಹಿತಿ ತೆಗೆದುಕೊಂಡು ತನಿಖೆ ಮಾಡುತ್ತೇವೆ. ತನಿಖೆ ಆಗುವವರೆಗೆ ಯಾವುದೇ ವಿಷಯ ಮಾತನಾಡುವುದಿಲ್ಲ ಎಂದಿದ್ದಾರೆ.
ಮಹಿಳೆ ಮತ್ತು ಅವರ ಮಗಳಿಗೆ ಪೊಲೀಸರು ರಕ್ಷಣೆ ನೀಡುತ್ತಾರೆಯೇ ಎಂದು ಕೇಳಿದಾಗ, ಗೃಹ ಸಚಿವರು ಈಗ ಅದು ಅಗತ್ಯವಿಲ್ಲ ಎಂದು ಹೇಳಿದರು. ಅಗತ್ಯವಿದ್ದರೆ, ಪೊಲೀಸರು ಮಹಿಳೆಗೆ ರಕ್ಷಣೆ ನೀಡುತ್ತಾರೆ, ಕೇಸು ದಾಖಲು ಹಿಂದೆ ಯಾವುದೇ ರಾಜಕೀಯ ಪ್ರೇರಣೆ ಕೃತ್ಯಗಳಿಲ್ಲ ಎಂದರು.