ನವದೆಹಲಿ: 2024ರ ಲೋಕಸಭಾ ಚುನಾವಣೆ ದಿನಾಂಕ ಶನಿವಾರ ಘೋಷಣೆಯಾಗಲಿದೆ. ಶನಿವಾರ ಮಧ್ಯಾಹ್ನ 3 ಗಂಟೆಗೆ ಚುನಾವಣಾ ಆಯೋಗ ಸುದ್ದಿಗೋಷ್ಠಿ ಕರೆದಿದೆ.
ಚುನಾವಣಾ ಆಯೋಗ 2024 ರ ಸಾರ್ವತ್ರಿಕ ಚುನಾವಣೆ ಮತ್ತು ಕೆಲವು ರಾಜ್ಯಗಳ ಅಸೆಂಬ್ಲಿಗಳ ವೇಳಾಪಟ್ಟಿಯನ್ನು ಘೋಷಿಸಲಿದೆ.
ಲೋಕಸಭೆ ಮಾತ್ರವಲ್ಲದೇ 4 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೂ ನಾಳೆ ಮುಹೂರ್ತ ಫಿಕ್ಸ್ ಆಗಲಿದ್ದು, ಏಪ್ರಿಲ್/ಮೇ ತಿಂಗಳಲ್ಲಿ ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ಹಾಗೂ ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ.
ಈ ಸುದ್ದಿಗೋಷ್ಠಿಯನ್ನು ಟ್ವಿಟರ್/ಎಕ್ಸ್ ಪ್ಲಾಟ್ ಫಾರ್ಮ್ ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದೆ.
17 ನೇ ಲೋಕಸಭೆಯ ಅಧಿಕಾರಾವಧಿಯು 16 ಜೂನ್ 2024 ರಂದು ಕೊನೆಗೊಳ್ಳಲಿದೆ.
2019ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಮನಾರ್ಹ ಗೆಲುವು ಸಾಧಿಸಿ ಒಟ್ಟು 303 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತ್ತು. ಈ ಚುನಾವಣೆಯಲ್ಲಿ ಒಟ್ಟು 912 ಮಿಲಿಯನ್ ಅರ್ಹ ಮತದಾರರ ಪೈಕಿ ಶೇ. 67%ರಷ್ಟು ಮತದಾನವಾಗಿತ್ತು. ಈ ಪೈಕಿ ಬಿಜೆಪಿ 37.36% ಮತಗಳನ್ನು ಪಡೆದಿದ್ದರೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಒಟ್ಟು 353 ಸ್ಥಾನಗಳನ್ನು ಗೆದ್ದಿತ್ತು.