ಹೊಸದಿಲ್ಲಿ: ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಳಲ್ಲಿ ಪ್ರಾಬಲ್ಯ ಮೆರೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2024ರ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ಮಹಿಳಾ ತಂಡ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇದರೊಂದಿಗೆ ಬರೋಬ್ಬರಿ 17 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಮೊದಲ ಟ್ರೋಫಿ ಎತ್ತಿ ಹಿಡಿದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಲು ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಆರ್‌ಸಿಬಿ ಪುರುಷರ ತಂಡಕ್ಕೆ ಚೊಚ್ಚಲ ಟ್ರೋಫಿ ದಕ್ಕಿಸಿಕೊಳ್ಳು ಮಹಿಳಾ ಪಡೆ ಸ್ಪೂರ್ತಿ ನೀಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಂಡು ಹದಿನಾರು ಆವೃತ್ತಿಗಳು ಕಳೆದರೂ ಆರ್‌ಸಿಬಿ ಪುರುಷರ ತಂಡ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಆದರೆ, ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾದ ಎರಡನೇ ಆವೃತ್ತಿಯಲ್ಲಿಯೇ ವನಿತೆಯರು ಚೊಚ್ಚಲ ಡಬ್ಲ್ಯುಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದಾರೆ. ಈ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ನನಸು ಮಾಡಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪವರ್ ಪ್ಲೇ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 60ಕ್ಕೂ ಹೆಚ್ಚು ರನ್‌ಗಳಿಸಿ ಬೃಹತ್ ಮೊತ್ತದ ಕಡೆಗೆ ಹೆಜ್ಜೆ ಇಟ್ಟಿತ್ತು. ಆದರೆ, ಆರ್‌ಸಿಬಿ ತಂಡದ ಸ್ಟಾರ್ ಬೌಲರ್‌ಗಳಾದ ಸೋಫಿ ಮೊಲಿನುಕ್ಸ್ (3 ವಿಕೆಟ್) ಮತ್ತು ಕನ್ನಡತಿ ಶ್ರೇಯಾಂಕ ಪಾಟೀಲ್ (4 ವಿಕೆಟ್) ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಎದುರಾಳಿ ಬ್ಯಾಟರ್‌ಗಳ ಬೇಟೆಯಾಡಿದರು. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ 183 ಓವರ್‌ಗಳಲ್ಲಿ 113 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್‌ಔಟ್ ಆಯಿತು.
ಡೆಲ್ಲಿ ತಂಡ ನೀಡಿದ್ದು 114 ರನ್‌ಗಳ ಸಾಧಾರಣ ಗುರಿಯಾದರೂ ಆರ್‌ಸಿಬಿ ಬ್ಯಾಟರ್‌ಗಳು ಸುಲಭವಾಗಿ ಗುರಿ ಮುಟ್ಟಲು ಕ್ಯಾಪಿಟಲ್ಸ್ ಬೌಲರ್‌ಗಳು ಅವಕಾಶ ನೀಡಲಿಲ್ಲ. ಲೋ ಸ್ಕೋರಿಂಗ್ ಪಂದ್ಯದಲ್ಲಿ ಡೆಲ್ಲಿ ಬೌಲರ್‌ಗಳು ಕೊನೆಯ ಓವರ್‌ವರೆಗೂ ಹೋರಾಟ ನಡೆಸಿದ್ದರು. ಆದರೆ, ಎಲೀಸ್ ಪೆರಿ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಆರ್‌ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಿತು. ಮುಂಬೈ ವಿರುದ್ದ ಎಲಿಮಿನೇಟರ್ ಕದನದಲ್ಲಿ ನಿರ್ಣಾಯಕ ಅರ್ಧಶತಕ ಸಿಡಿಸಿ ಆರ್‌ಸಿಬಿ ತಂಡವನ್ನು ಗೆಲ್ಲಿಸಿದ್ದ ಎಲೀಸ್ ಪೆರಿ ಫೈನಲ್ ಪಂದ್ಯದಲ್ಲಿಯೂ 37 ಎಸೆತಗಳಲ್ಲಿ ಅಜೇಯ 35 ರನ್ ಗಳಿಸಿ ತಮ್ಮ ತಂಡವನ್ನು ಚಾಂಪಿಯನ್ ಮಾಡಿದ್ದಾರೆ. ಇದಕ್ಕೂ ಮುನ್ನ ಸೋಫಿ ಡಿವೈನ್ ಹಾಗೂ ಸ್ಮೃತಿ ಮಂಧಾನಾ ಕ್ರಮವಾಗಿ 32 ಹಾಗೂ 31 ರನ್‌ಗಳನ್ನು ಗಳಿಸಿದ್ದರು.
ಎಲೀಸ್ ಪೆರಿಗೆ ಆರೆಂಜ್ ಕ್ಯಾಪ್
ಎಲೀಸ್ ಪೆರಿ ಟೂರ್ನಿಯಲ್ಲಿ ಒಟ್ಟು 347 ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆದ್ದರು. ಡೆಲ್ಲಿ ಕ್ಯಾಪಿಟಲ್ಸ್ ವೇಗಿ ಮರಿಝಾನೆ ಕಾಪ್ ಒಟ್ಟು 11 ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಗೆದ್ದರು. ಆರ್‌ಸಿಬಿ ಆಳ್‌ರೌಂಡರ್ ಹಾಗೂ ಕನ್ನಡತಿ ಶ್ರೇಯಾಂಕ ಪಾಟೀಲ್ ಟೂರ್ನಿಯ ಉದಯೋನ್ಮುಖ ಆಗಾರ್ತಿ ಪ್ರಶಸ್ತಿಗೆ ಭಾಜನರಾದರು.