ಶ್ರೀನಗರ: ಈ ಹಿಂದೆಲ್ಲಾ ಕಲ್ಲೆಸೆತಕ್ಕೆ ಸುದ್ದಿಯಾಗುತ್ತಿದ್ದ ಕಾಶ್ಮೀರ ಈಗ ಬದಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಅಲ್ಲಿ ಫಾರ್ಮುಲಾ-4 ಕಾರ್ ರೇಸ್ ನಡೆದಿದೆ.
ಶ್ರೀನಗರದ ವಿಶ್ವಪ್ರಸಿದ್ಧ ದಾಲ್ ಸರೋವರದ ದಡದಲ್ಲಿ ಭಾನುವಾರದಂದು ಮೊದಲ ಬಾರಿಗೆ ಫಾರ್ಮುಲಾ 4 ಕಾರ್ ರೇಸಿಂಗ್ ಪ್ರದರ್ಶನ ನಡೆಯಿತು.
ವೃತ್ತಿಪರ ಫಾರ್ಮುಲಾ 4 ಚಾಲಕರು ಪ್ರದರ್ಶಿಸಿದ ಸಾಹಸಗಳನ್ನು ವೀಕ್ಷಿಸಿದ ಸ್ಥಳೀಯರು ರೋಮಂಚನಗೊಂಡಿದ್ದಾರೆ. ನಗರದ ದಾಲ್ ಸರೋವರದ ದಡದಲ್ಲಿರುವ ಲಲಿತ್ ಘಾಟ್ನಿಂದ ನೆಹರೂ ಪಾರ್ಕ್ವರೆಗಿನ 1.7 ಕಿಮೀ ಟ್ರ್ಯಾಕ್ನಲ್ಲಿ ಸ್ಲೀಕ್ ರೇಸಿಂಗ್ ಕಾರುಗಳು ಘರ್ಜಿಸಿದವು.
ನೂರಾರು ಉತ್ಸಾಹಿ ಯುವಕರು ರಸ್ತೆಯಲ್ಲಿ ಸಾಲುಗಟ್ಟಿ ನಿಂತು ಈ ರೇಸ್ ವೀಕ್ಷಿಸಿದ್ದಾರೆ. ಕಾಶ್ಮೀರದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಕ್ರೀಡೆಯನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಯುವಕರನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಆರ್ಟಿಕಲ್ 370 ತೆಗೆದ ನಂತರ ನಮ್ಮ ಕಾಶ್ಮೀರ ಬದಲಾಗುತ್ತಿದೆ. ಮೊಟ್ಟಮೊದಲ ಫಾರ್ಮುಲಾ 4 ಕಾರ್ ಶೋ ದಾಲ್ ಲೇಕ್ ಶ್ರೀನಗರದ ದಡದಲ್ಲಿ ನಡೆಯಿತು ಎಂದು ಕಾಶ್ಮೀರದ ನೆಟ್ಟಿಗರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಕಾಶ್ಮೀರದ ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮೋದಿ ಮೆಚ್ಚುಗೆ
ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ನೋಡಲು ತುಂಬಾ ಸಂತೋಷವಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದ ಸೌಂದರ್ಯವನ್ನು ಮತ್ತಷ್ಟು ಪ್ರದರ್ಶಿಸಲು ಸಹಾಯ ಮಾಡುತ್ತದೆ. ಭಾರತವು ಮೋಟಾರು ಕ್ರೀಡೆಗಳು ಅಭಿವೃದ್ಧಿ ಹೊಂದಲು ಉತ್ತಮ ಅವಕಾಶಗಳನ್ನು ನೀಡುತ್ತದೆ ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ..