ಮಾಸ್ಕೋ: ರಷ್ಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾದಿಮಿರ್ ಪುಟಿನ್ ಭರ್ಜರಿ ಶೇ.87ರಷ್ಟು ಮತಗಳಿಸುವ ಮೂಲಕ ಸತತ ಗೆಲುವು ಸಾಧಿಸಿದ್ದು, ರಷ್ಯಾದ ಇತಿಹಾಸದಲ್ಲೇ ದೀರ್ಘಕಾಲ ಅಧ್ಯಕ್ಷಗಾದಿ ಏರಿದ ಹೆಗ್ಗಳಿಕೆಗೆ ಪುಟಿನ್ ಪಾತ್ರರಾಗಿದ್ದಾರೆ.
ಕಮ್ಯೂನಿಸ್ಟ್ ಪಾರ್ಟಿ ಆಫ್ ರಷ್ಯನ್ ಫೆಡರೇಶನ್ ಅಭ್ಯರ್ಥಿ ನಿಕೊಲಾಯ್ ಖರಿಟೋನೊವ್ ಶೇ. 4.1 ರಷ್ಟು ಮತಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ. ನ್ಯೂ ಫೀಪಲ್ ಪಾರ್ಟಿ ಅಭ್ಯರ್ಥಿ ವ್ಲಾಡಿಸ್ಲಾವ್ ದಾವಂಕೋವ್ ಶೇ. 4.8 ರಷ್ಟು ಮತಗಳೊಂದಿಗೆ ಮೊರನೇ ಸ್ಥಾನದಲ್ಲಿದ್ದಾರೆ. ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ರಷ್ಯಾ ಅಭ್ಯರ್ಥಿ ಲಿಯೊನಿಡ್ ಸ್ಲಟ್ಸ್ಕಿ ಶೇ. 3.15 ರಷ್ಟು ಮತಗಳನ್ನು ಪಡೆದಿದ್ದಾರೆ.
ಭಾನುವಾರ ಸಂಜೆ ಮತದಾನ ಮುಕ್ತಾಯವಾಗಿದ್ದು, ಮಾರ್ಚ್ 15-17 ರಿಂದ ಮೂರು ದಿನ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನದ ಪ್ರಮಾಣವು ಶೇಕಡಾ 74.22 ರಷ್ಟಿದೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಶೇ.67.54ರಷ್ಟು ಮತದಾನವಾಗಿತ್ತು. 2018 ರ ಚುನಾವಣೆಗಳಿಗೆ ಹೋಲಿಸಿದರೆ ಪುಟಿನ್ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ.
ಸೋವಿಯತ್ ರಷ್ಯಾದ ಮುಖಂಡ ಜೋಸೆಫ್ ಸ್ಟಾಲಿನ್ ನಂತರ ಪುಟಿನ್ ದೀರ್ಘಾವಧಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದಂತಾಗಿದೆ. 1999-2000ದವರೆಗೆ ಹಂಗಾಮಿ ಅಧ್ಯಕ್ಷರಾಗಿ, ನಂತರ 2000-2004ರವರೆಗೆ ಮೊದಲ ಬಾರಿ ಪುಟಿನ್ ಅಧ್ಯಕ್ಷರಾಗಿ ಆಯ್ಕೆ. 2004-2008ರವರೆಗೆ ಎರಡನೇ ಬಾರಿ ಅಧ್ಯಕ್ಷರಾಗಿ ಪುನರಾಯ್ಕೆ. 2012-2018ರಲ್ಲಿ ಮೂರನೇ ಬಾರಿ ಅಧ್ಯಕ್ಷರಾಗಿ ಆಯ್ಕೆ. 2012ರ ಚುನಾವಣೆಯ ನಂತರ ರಷ್ಯಾ ಅಧ್ಯಕ್ಷರ ಅವಧಿಯನ್ನು ನಾಲ್ಕರಿಂದ ಆರು ವರ್ಷಕ್ಕೆ ವಿಸ್ತರಿಸಿ ಕಾನೂನು ತಿದ್ದುಪಡಿ ಮಾಡಲಾಗಿತ್ತು. 2018ರಲ್ಲಿ ಪುಟಿನ್ ನಾಲ್ಕನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದರು. 2024ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲೂ ಪುಟಿನ್ ಗೆಲುವಿನ ನಗು ಬೀರಿದ್ದಾರೆ.
71ವರ್ಷದ ವ್ಲಾದಿಮಿರ್ ಪುಟಿನ್ ಇನ್ನು ಆರು ವರ್ಷಗಳ ಕಾಲ ರಷ್ಯಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದರೊಂದಿಗೆ ಜೋಸೆಫ್ ಸ್ಟಾಲಿನ್ ಅವರ ದಾಖಲೆಯನ್ನು ಮುರಿದಂತಾಗಿದೆ.
ಮೂರನೇ ಜಾಗತಿಕ ಯುದ್ಧದ ಎಚ್ಚರಿಕೆ!
ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳು ಮತ್ತು ರಷ್ಯಾದ ನಡುವೆ ಯಾವುದೇ ನೇರ ಸಂಘರ್ಷ ನಡೆದಲ್ಲಿ ಅದು ಮೂರನೇ ವಿಶ್ವಯುದ್ಧಕ್ಕೆ ಮುನ್ನುಡಿ ಬರೆಯಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಕೆಯ ಸಂದೇಶ ರವಾನಿಸಿರುವುದಾಗಿ ವರದಿಯಾಗಿದೆ. ರಷ್ಯಾ ಮತ್ತು ಉಕ್ರೈನ್ ನಡುವಿನ ಯುದ್ಧದ ಪರಿಣಾಮ ಮಾಸ್ಕೋ ಮತ್ತು ಇತರ ಪಾಶ್ಚಿಮಾತ್ಯ ದೇಶಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಉಕ್ರೈನ್ ಯುದ್ಧದಲ್ಲಿ ತನಗೆ ಪರಮಾಣು ಬಳಕೆಯ ಅಗತ್ಯ ಬಿದ್ದಿರಲಿಲ್ಲ ಎಂದು ಪುಟಿನ್ ಪ್ರತಿಪಾದಿಸಿದ್ದಾರೆ.