ದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ರನ್ನು ಬಂಧಿಸಲಾಗಿದೆ. ಅಬಕಾರಿ ನೀತಿ ಹಗರಣದ ತನಿಖೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಕೋರಿದ್ದರು. ಆದರೆ ತಮ್ಮನ್ನು ಬಂಧಿಸದಂತೆ ಇಡಿಗೆ ನಿರ್ದೇಶನ ನೀಡುವಂತೆ ಕೋರಿ ಕೇಜ್ರಿವಾಲ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಅರವಿಂದ್ ಕೇಜ್ರಿವಾಲ್ ಮನವಿ ತಿರಸ್ಕರಿಸಿದ್ದ ಹೈಕೋರ್ಟ್, ಅವರನ್ನು ಯಾಕೆ ಬಂಧಿಸಿಲ್ಲ ಅಂತ ಇಡಿ ಅಧಿಕಾರಿಗಳನ್ನು ಪ್ರಶ್ನಿಸಿತ್ತು.
ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ನಿವಾಸಕ್ಕೆ ತೆರಳಿದ್ದ ಇಡಿ ಅಧಿಕಾರಿಗಳು, ವಿಚಾರಣೆ ನಡೆಸಿದರು. ಆದರೆ ಸಮರ್ಪಕ ಉತ್ತರ ಸಿಗದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿಯನ್ನು ಬಂಧಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣದ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು, ಅರವಿಂದ್ ಕೇಜ್ರಿವಾಲ್‌ಗೆ ಸಮನ್ಸ್ ಜಾರಿ ಮಾಡಿದ್ದರು. 9 ಬಾರಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದಿಂದ ಕೇಜ್ರಿವಾಲ್‌ಗೆ ಸಮನ್ಸ್ ಜಾರಿ ಮಾಡಿತ್ತು.
ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಲಿರಲಿಲ್ಲ.
ಇಡಿ ಸಮನ್ಸ್ ವಿರುದ್ಧ ಕೇಜ್ರಿವಾಲ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಇಡಿ ಬಂಧನದಿಂದ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು.
ಆದರೆ ಕೇಜ್ರಿವಾಲ್ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು. ಈ ಹಂತದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡುವುದಿಲ್ಲ ಅಂತ ಸ್ಪಷ್ಟಪಡಿಸಿದ್ದ ನ್ಯಾಯಪೀಠ, ಕೇಜ್ರಿವಾಲ್ ಅವರ ಮನವಿಗೆ ಉತ್ತರಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದ ಹೈಕೋರ್ಟ್, ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿತ್ತು.
ಕೇಜ್ರಿವಾಲ್ ಮನವಿಯನ್ನು ಹೈಕೋರ್ಟ್ ತಿರಸ್ಕರಿಸುತ್ತಿದ್ದಂತೆ ಇಡಿ ಅಧಿಕಾರಿಗಳು ಸಂಜೆ ದೆಹಲಿ ಸಿಎಂ ನಿವಾಸಕ್ಕೆ ಧಾವಿಸಿದರು. ಬಳಿಕ ಅರವಿಂದ್ ಕೇಜ್ರಿವಾಲ್‌ರನ್ನು ವಿಚಾರಣೆ ನಡೆಸಿದರು. ಆದರೆ, ಸೂಕ್ತ ಉತ್ತರ ಸಿಗದ ಕಾರಣ ಇದೀಗ ಕೇಜ್ರಿವಾಲ್‌ರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.