ಚೆನ್ನೈ: ಮುಸ್ತಾಪಿಝರ್ ರೆಹಮಾನ್ (29ಕ್ಕೆ 4) ಅವರ ಘಾತಕ ಬೌಲಿಂಗ್ ದಾಳಿಯ ಸಹಾಯದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಉದ್ಘಾಟನಾ ಪಂದ್ಯದಲ್ಲಿ 6 ವಿಕೆಟ್ಗಳಿಂದ ಗೆದ್ದು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಎಂಎ ಚಿದಂಬರಂ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರ್ಸಿಬಿ ನೀಡಿದ್ದ 174 ರನ್ಗಳ ಗುರಿಯನ್ನು ಹಿಂಬಾಲಿಸಿದ ಸಿಎಸ್ಕೆ 18.4 ಓವರ್ಗಳಿಗೆ 4 ವಿಕೆಟ್ಗಳ ನಷ್ಟಕ್ಕೆ 176 ರನ್ ಗಳಿಸಿ ಗೆಲುವಿನ ದಡ ಸೇರಿತು. ಚೆನ್ನೈ ಪರ ಕೇವಲ 15 ಎಸೆತಗಳಲ್ಲಿ 37 ರನ್ ಸಿಡಿಸಿದ ರಚಿನ್ ರವೀಂದ್ರ ಎಲ್ಲರ ಗಮನ ಸೆಳೆದರೆ, ಕೊನೆಯ ಓವರ್ಗಳಲ್ಲಿ ಒತ್ತಡವನ್ನು ಮೆಟ್ಟಿ ನಿಂತು ಅಜೇಯ 34 ರನ್ ಸಿಡಿಸಿದ ಶಿವಂ ದುಬೆ ಸಿಎಸ್ಕೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಸಿಎಸ್ಕೆ ನಾಯಕನಾಗಿ ಋತುರಾಜ್ ಗಾಯಕ್ವಾಡ್ಗೆ ಮೊದಲ ಜಯ ಇದಾಗಿದೆ.
ಇನ್ನುಳಿದಂತೆ ಅಜಿಂಕ್ಯ ರಹಾನೆ (27), ಡ್ಯಾರಿಲ್ ಮಿಚೆಲ್ (25) ಹಾಗೂ ರವೀಂದ್ರ ಜಡೇಜಾ (22*) ನಿರ್ಣಾಯಕ ಕೊಡುಗೆ ನೀಡಿದರು. ಆರ್ಸಿಬಿ ಪರ ಕ್ಯಾಮೆರಾನ್ ಗ್ರೀನ್ 27 ರನ್ ನೀಡಿ 2 ವಿಕೆಟ್ ಕಿತ್ತರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ, ತನ್ನ ಪಾಲಿನ 20 ಓವರ್ಗಳಿಗೆ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿದೆ. ಆ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 174 ರನ್ಗಳ ಕಠಿಣ ಗುರಿ ನೀಡಿತ್ತು.
ಫಾಫ್ ಡು ಪ್ಲೆಸಿಸ್ (35) ಉತ್ತಮ ಆರಂಭ ತಂದುಕೊಟ್ಟು ವಿಕೆಟ್ ಒಪ್ಪಿಸಿದರೆ, ರಜತ್ ಪಾಟಿದಾರ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ವಿರಾಟ್ ಕೊಹ್ಲಿ 21 ರನ್ಗೆ ಸೀಮಿತರಾದರು. ಕ್ಯಾಮೆರಾನ್ ಗ್ರೀನ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಆದರೆ ಕೆಳ ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಹಾಗೂ ಅನುಜ್ ರಾವತ್ ಅವರು 50 ಎಸೆತಗಳಲ್ಲಿ 95 ರನ್ಗಳ ನಿರ್ಣಾಯಕ ಜೊತೆಯಾಟವನ್ನು ಆಡಿ ಆರ್ಸಿಬಿಯ ಮತ್ತವನ್ನು 170ರ ಗಡಿ ದಾಟಿಸಿದರು. ಅನುಜ್ ರಾವತ್ 25 ಎಸೆತಗಳಲ್ಲಿ 48 ರನ್ ಗಳಿಸಿದರೆ, ದಿನೇಶ್ ಕಾರ್ತಿಕ್ 26 ಎಸೆತಗಳಲ್ಲಿ ಅಜೇಯ 38 ರನ್ ಸಿಡಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಪರ ಮುಸ್ತಾಫಿಝರ್ ರೆಹಮಾನ್ 4 ಓವರ್ಗಳಿಗೆ 29 ರನ್ ನೀಡಿ 4 ವಿಕೆಟ್ ಸಾಧನೆ ಮಾಡಿದ್ದಾರೆ.
ಪಂದ್ಯ ಶ್ರೇಷ್ಠ ಪ್ರಶಸ್ತಿ: ಮುಸ್ತಾಫಿಝರ್ ರೆಹಮಾನ್