ಹೈದರಾಬಾದ್: ತೆಲಂಗಾಣದ ಸಿಕಂದರಾಬಾದ್‌ನಲ್ಲಿ ದರೋಡೆ ಮಾಡಲು ಮನೆಗೆ ಬಲವಂತವಾಗಿ ನುಗ್ಗಿದ್ದ ಇಬ್ಬರು ಶಸ್ತ್ರಸಜ್ಜಿತ ದುಷ್ಕರ್ಮಿಗಳನ್ನು ತಾಯಿ ಮತ್ತು ಮಗಳು ಸೇರಿ ಧೈರ್ಯದಿಂದ ಹೊಡೆದೋಡಿಸಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಮ್ಮ- ಮಗಳ ಸಾಹಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಗುರುವಾರ ಅಮಿತಾ ಮಹ್ನೋತ್ ಮತ್ತು ಅವರ ಮಗಳು ಮನೆಯಲ್ಲಿದ್ದರು. ಮಧ್ಯಾಹ್ನ 1 ಗಂಟೆ ವೇಳೆಗೆ ಸುಶೀಲ್ ಕುಮಾರ್ ಮತ್ತು ಪ್ರೇಮಚಂದ್ರ ಎಂಬ ಇಬ್ಬರು ದುಷ್ಕರ್ಮಿಗಳು ಅವರ ಮನೆಗೆ ಕೊರಿಯರ್ ಡೆಲಿವರಿ ಏಜೆಂಟ್‌ಗಳ ನೆಪದಲ್ಲಿ ಬಲವಂತವಾಗಿ ಪ್ರವೇಶಿಸಿದ್ದರು. ಮನೆಕೆಲಸದಾಕೆ ಕೊರಿಯರ್ ತೆಗೆದುಕೊಳ್ಳಲು ಹೋದಾಗ ಒಳಗೆ ನುಗ್ಗಿದ್ದರು. ಅವರ ಕಡೆಗೆ ನಾಡ ಪಿಸ್ತೂಲು ಹಾಗೂ ಚಾಕು ತೋರಿಸಿ ಬೆದರಿಸುತ್ತಾ, ಬೆಲೆಬಾಳುವ ವಸ್ತುಗಳು ಹಾಗೂ ಹಣ ನೀಡುವಂತೆ ಬೇಡಿಕೆ ಇರಿಸಿದ್ದರು. ಒಬ್ಬ ಹೆಲ್ಮೆಟ್ ಧರಿಸಿದ್ದರೆ, ಇನ್ನೊಬ್ಬ ಮಾಸ್ಕ್ ತೊಟ್ಟಿದ್ದ. ಒಬ್ಬ ಆರೋಪಿ ಕಿಚನ್‌ಗೆ ತೆರಳಿ ಮನೆಗೆಲಸದಾಕೆಯ ಕತ್ತಿಗೆ ಚಾಕು ಹಿಡಿದು ಬೆದರಿಸಿದ್ದ.
ಒಬ್ಬ ದರೋಡೆಕೋರ, ಕೈಯಲ್ಲಿ ಆಯುಧ ಹಿಡಿದು ಅಮ್ಮ ಮತ್ತು ಮಗಳನ್ನು ಬೆದರಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸಿದೆ. ಆದರೆ ಮಾರ್ಷಿಯಲ್ ಆರ್ಟ್ಸ್‌ನಲ್ಲಿ ಪರಿಣತರಾಗಿರುವ 46 ವರ್ಷದ ಅಮಿತಾ, ಆ ದರೋಡೆಕೋರ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಆತನಿಂದ ಪಿಸ್ತೂಲು ಕಿತ್ತುಕೊಂಡಿದ್ದಾರೆ. ಮಗಳ ಜತೆಗೂಡಿ ಆತನನ್ನು ಚೆನ್ನಾಗಿ ಥಳಿಸಿ ಮನೆಯಿಂದ ಹೊರಗೆ ಓಡುವಂತೆ ಮಾಡಿದ್ದಾರೆ.
ಹೆಲ್ಮೆಟ್ ಧರಿಸಿದ್ದ ದರೋಡೆಕೋರ ಸುಶೀಲ್ ತಪ್ಪಿಸಿಕೊಳ್ಳಲು ಮುಂದಾದಾಗ ಸಾಹಸಿ ಅಮ್ಮ- ಮಗಳು, ಆತನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆತನಿಗೆ ಒದ್ದು, ನೆಲಕ್ಕೆ ತಳ್ಳಿ ಥಳಿಸಿದ್ದಾರೆ. ಕೊನೆಗೆ ಆತನ ಅವರಿಂದ ತಪ್ಪಿಸಿಕೊಂಡು ಮನೆಯ ಗೇಟ್‌ನಿಂದ ಹೊರಗೆ ಓಡಿದ್ದಾನೆ. ತನ್ನ ಜತೆಗಾರರನ್ನು ಅಮ್ಮ- ಮಗಳು ಹೊಡೆದು ಓಡಿಸಿದ್ದು ಅಡುಗೆ ಮನೆಯಲ್ಲಿದ್ದ ದುಷ್ಕರ್ಮಿಗೆ ಗೊತ್ತಿರಲಿಲ್ಲ.
ಗಲಾಟೆ ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರು ತಾಯಿ- ಮಗಳಿಗೆ ಸಹಾಯ ಮಾಡಲು ಮನೆಗೆ ಓಡಿ ಬಂದಿದ್ದಾರೆ. ಮತ್ತೊಬ್ಬ ದರೋಡೆಕೋರ ಪ್ರೇಮಚಂದ್ರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ದುಷ್ಕರ್ಮಿಗಳು ಉತ್ತರ ಪ್ರದೇಶದ ಕಾನ್ಪುರ ಮೂಲದವರು ಎಂದು ತಿಳಿದುಬಂದಿದೆ.