ಈರೋಡ್: ತಮಿಳುನಾಡಿನ ಈರೋಡ್ ಕ್ಷೇತ್ರದ ಹಾಲಿ ಎಂಡಿಎಂಕೆ ಸಂಸದ ಎ.ಗಣೇಶಮೂರ್ತಿ (76) ಮುಂಬರುವ ಲೋಕಸಭಾ ಚುನಾವಣೆಗೆ ಟಿಕೆಟ್ ಕೈತಪ್ಪಿದ್ದಕ್ಕೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಭಾನುವಾರ ಬೆಳಿಗ್ಗೆ ಗಣೇಶಮೂರ್ತಿಯವರ ಆರೋಗ್ಯದಲ್ಲಿ ಏರುಪೇರಾಗಿ, ವಾಂತಿ ಮಾಡಿಕೊಂಡಿದ್ದಾರೆ. ಆಗ ಕೀಟನಾಶಕ ಸೇವನೆ ಮಾಡಿರುವುದಾಗಿ ನಮಗೆ ತಿಳಿಸಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ.
ತಕ್ಷಣ ಅವರನ್ನು ಚಿಕಿತ್ಸೆಗಾಗಿ ಈರೋಡ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ತಪಾಸಣೆಗೆ ಒಳಪಡಿಸಿದ ಬಳಿಕ ಐಸಿಯುಗೆ ದಾಖಲಿಸಿ, ವೆಂಟಿಲೇಟರ್‍ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ವೈಕೋ ನಾಯಕತ್ವದ ಎಂಡಿಎಂಕೆ ಪಕ್ಷವು ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದೆ. ಕಳೆದ ಚುನಾವಣೆಯಲ್ಲಿ ಡಿಎಂಕೆ ತನ್ನ ಮಿತ್ರಪಕ್ಷಕ್ಕೆ ಈರೋಡ್ ಕ್ಷೇತ್ರವನ್ನು ಬಿಟ್ಟುಕೊಟ್ಟಿತ್ತು. ಅಲ್ಲಿಂದ ಎಂಡಿಎಂಕೆ ಅಭ್ಯರ್ಥಿ ಗಣೇಶಮೂರ್ತಿ ಸ್ಪರ್ಧೆ ಮಾಡಿ ಗೆದ್ದಿದ್ದರು. ಈ ಬಾರಿ ಈರೋಡ್ ಲೋಕಸಭೆ ಕ್ಷೇತ್ರದಿಂದ ಡಿಎಂಕೆ ತನ್ನದೇ ಅಭ್ಯರ್ಥಿ ಕೆ.ಇ ಪ್ರಕಾಶ್ ಅವರಿಗೆ ಟಿಕೆಟ್ ನೀಡಿದೆ. ಎಂಡಿಎಂಕೆಗೆ ತಿರುಚಿರಾಪಳ್ಳಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ.