ಬೆಂಗಳೂರು: ಪ್ರಧಾನಿ ಮೋದಿ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ವಿರುದ್ಧ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.
ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಕೊಪ್ಪಳ ಕ್ಷೇತ್ರದ ತಮ್ಮ ಪಕ್ಷದ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಪರ ಪ್ರಚಾರ ಮಾಡುವ ಸಮಯದಲ್ಲಿ ಮೋದಿ ವಿರುದ್ಧ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದರು.
ಶಿವರಾಜ ತಂಗಡಗಿ ತಮ್ಮ ಭಾಷಣದಲ್ಲಿ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಕಾರಟಗಿಯಲ್ಲಿ ಚುನಾವಣಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಗಂಗಾವತಿ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಗ್ಯಾನನಗೌಡ ನಂದನಗೌಡ ನೀಡಿದ ದೂರು ಮೇಲೆ ಪ್ರಕರಣ ದಾಖಲಾಗಿದೆ.
ಭಾನುವಾರ (ಮಾ. 24) ಕಾರಟಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ತಂಗಡಗಿ ಮಾತನಾಡುತ್ತ, ಯುವಕರಿಗೆ ಎರಡು ಕೋಟಿ ಉದ್ಯೋಗ ಕೊಡುವುದಾಗಿ ಹೇಳಿ ಪ್ರಧಾನಿ ನರೇಂದ್ರ ಮೋದಿ ಮಾತು ತಪ್ಪಿದ್ದಾರೆ. ಉದ್ಯೋಗ ಕೊಡಿ ಎಂದು ಕೇಳಿದರೆ ಪಕೋಡಾ ಮಾರಲು ಹೋಗಿ ಎಂದಿದ್ದಾರೆ. ಈಗಲೂ ಯುವಕರು ಹಾಗೂ ವಿದ್ಯಾರ್ಥಿಗಳು ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡೆಯಬೇಕು ಎಂದು ಆಕ್ರೋಶ ಹೊರಹಾಕಿದ್ದರು.
ಹೇಳಿಕೆ ಬೆನ್ನಲ್ಲೇ ಕೊಪ್ಪಳದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಶಿವರಾಜ್ ತಂಡಗಡಿ ಅವರನ್ನು ಟೀಕಿಸಿದ್ದರು.
ವಿರೋಧ ಬೆನ್ನಲ್ಲೇ ಹೇಳಿಕೆ ಸಮರ್ಥಿಸಿಕೊಂಡಿದ್ದ ತಂಗಡಗಿ, ಕಾಂಗ್ರೆಸ್ ನಾಯಕನಾಗಿ ಬಿಜೆಪಿಯನ್ನು ಹೊಗಳಲು ಸಾಧ್ಯವಿಲ್ಲ, ಹೇಗೆ ಮತ್ತು ಏನು ಮಾತನಾಡಬೇಕೆಂದು ನನಗೆ ತಿಳಿದಿದೆ. ಕಾಂಗ್ರೆಸ್ ನಾಯಕನಾಗಿ ನಾನು ಬಿಜೆಪಿಯನ್ನು ಹೊಗಳಬೇಕೇ? ಎಂದು ಪ್ರಶ್ನಿಸಿದ್ದಾರ.
ಈ ನಡುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ತನಿಖಾ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.