ಬೆಂಗಳೂರು: ಎನ್‌ಡಿಎ ಮೈತ್ರಿಕೂಟದಡಿ ‘ಅಬ್ ಕಿ ಬಾರ್ 400 ಪಾರ್’ ಘೋಷಣೆ ಮೊಳಗಿಸಿರುವ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 370 ಸ್ಥಾನ ಗೆಲ್ಲುವ ಮಹತ್ವಾಕಾಂಕ್ಷೆ ಹೊಂದಿದೆ. ಈ ಗುರಿ ತಲುಪಲು ಟಿಕೆಟ್ ಹಂಚಿಕೆ ಹಂತದಲ್ಲಿಯೇ ಭಾರಿ ಎಚ್ಚರಿಕೆ ವಹಿಸಿರುವ ಬಿಜೆಪಿಯು, ಹಾಲಿ 100 ಸಂಸದರನ್ನು ಕೈ ಬಿಟ್ಟಿದೆ. ಹೊಸ ಮುಖಗಳಿಗೆ ಮಣೆ ಹಾಕಿದೆ.
28 ರಾಜ್ಯ, 8 ಕೇಂದ್ರಾಡಳಿತ ಪ್ರದೇಶಗಳ 401 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿರುವ ಬಿಜೆಪಿಯು ಸ್ಥಳೀಯವಾಗಿ ಕಂಡುಬಂದಿರುವ ವಿರೋಧಿ ಅಲೆ, ವಯೋಮಾನ, ಅಭಿವೃದ್ಧಿ ವಿಚಾರದಲ್ಲಿ ನಿರಾಸಕ್ತಿ, ವಿವಾದಿತ ಹೇಳಿಕೆಗಳು ಮೊದಲಾದ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಸಂಸದರಿಗೆ ಟಿಕೆಟ್ ನಿರಾಕರಿಸಿದೆ. ಆಂತರಿಕ ಸಮೀಕ್ಷೆ, ಜನಮತ ಅಭಿಪ್ರಾಯ, ಹಾಲಿ ಸಂಸದರ ಕಾರ್ಯವೈಖರಿ ಆಧರಿಸಿ ಟಿಕೆಟ್ ನೀಡಲಾಗಿದೆ.
ತನ್ನ 303 ಸಂಸದರ ಪೈಕಿ 100 ಸಂಸದರಿಗೆ ಟಿಕೆಟ್ ನಿರಾಕರಿಸಿರುವ ಬಿಜೆಪಿಯು, ತಾನು ಕಳೆದ ಬಾರಿ ಗೆದ್ದಿದ್ದ ಕ್ಷೇತ್ರಗಳ ಪೈಕಿ ಮೂರನೇ ಒಂದರಷ್ಟು ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಕಣಕ್ಕೆ ಇಳಿಸಿದೆ. 2019ರಲ್ಲಿ ಪ್ರಯೋಗಿಸಿದ ಸೂತ್ರವನ್ನೇ 2024ರಲ್ಲೂ ಬಿಜೆಪಿ ಬಳಸಿದ್ದು, ಬೃಹತ್ ಬದಲಾವಣೆ ಮಾಡಿದೆ. ಇನ್ನೂ 30 ರಿಂದ 40 ಅಭ್ಯರ್ಥಿ ಪ್ರಕಟಿಸಬೇಕಿರುವ ಬಿಜೆಪಿಯಿಂದ ಮತ್ತಷ್ಟು ಅಚ್ಚರಿ ಹೆಸರು ಹೊರ ಬೀಳುವ ನಿರೀಕ್ಷೆಯಿದೆ.
ಮೊದಲ ಪಟ್ಟಿ ಪ್ರಕಟಿಸಿದಾಗ 33 ಹಾಲಿ ಸಂಸದರಿಗೆ ಕೊಕ್ ನೀಡಿದ್ದ ಬಿಜೆಪಿ, ಎರಡನೇ ಪಟ್ಟಿ ಪ್ರಕಟಿಸಿದಾಗ 30, ಐದನೇ ಪಟ್ಟಿಯಲ್ಲಿ 37 ಸಂಸದರನ್ನು ಕೈಬಿಟ್ಟಿದೆ.
ಲೋಕಸಭೆಯ ಒಟ್ಟು ಸಂಖ್ಯೆಯಲ್ಲಿ ಶೇ 34 ರಷ್ಟು ಸಂಸದರನ್ನು ಹೊಂದಿದ ಬಿಜೆಪಿ (303) ಪ್ರತಿ ಮೂವರು ಸದಸ್ಯರಲ್ಲಿ ಒಬ್ಬರಿಗೆ ಕೊಕ್ ನೀಡಿದೆ. 2019 ರಲ್ಲಿಇದೇ ತಂತ್ರ ಅನುಸರಿಸಿದ್ದ ಬಿಜೆಪಿ 282 ಸಂಸದರ ಪೈಕಿ 119 ಸಂಸದರಿಗೆ ಗೇಟ್ ಪಾಸ್ ನೀಡಿತ್ತು.