ನವದೆಹಲಿ: ಶೀಘ್ರದಲ್ಲೇ ಟೋಲ್ ಪಾವತಿ ಸೇವೆಗಳಿಗೆ ತೆರೆ ಬೀಳಲಿದ್ದು, ಸ್ಯಾಟೆಲೈಟ್ ಆಧಾರಿತ ಟೋಲ್ ಸೇವೆ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಹಾಲಿ ಇರುವ ಫಾಸ್ಟ್ ಟ್ಯಾಗ್ ಪಾವತಿ ಸೇವೆ ಇದ್ದರೂ ಟೋಲ್ ಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ಟೋಲ್‌ಗೇಟ್‌ಗಳಲ್ಲಿ ಕಾಯುವ ಪರಿಸ್ಥಿತಿ ಇರುತ್ತಿದೆ. ಇದನ್ನು ತಪ್ಪಿಸಲು ಕೇಂದ್ರ ರಸ್ತೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಹೊಸ ಯೋಜನೆ ರೂಪಿಸಿದ್ದು, ದೇಶದಲ್ಲಿ ಟೋಲ್ ಸಂಗ್ರಹಕ್ಕೆ ಟೋಲ್‌ಗೇಟ್‌ಗಳ ಬದಲು, ಸ್ಯಾಟಲೈಟ್ ಆಧಾರಿತ ಟೋಲ್ ಸಿಸ್ಟಂ ಜಾರಿಗೆ ತರಲು ಮುಂದಾಗಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ‘ನಾವು ಶೀಘ್ರದಲ್ಲಿಯೇ ದೇಶಾದ್ಯಂತ ಸ್ಯಾಟಲೈಟ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ತರುತ್ತೇವೆ. ಹೊಸ ಯೋಜನೆ ಮೂಲಕ ದೇಶದ ಜನ ಎಷ್ಟು ಕಿಲೋಮೀಟರ್‌ವರೆಗೆ ರಸ್ತೆಯನ್ನು ಬಳಸಿರುತ್ತಾರೋ, ಅಷ್ಟು ಕಿಲೋಮೀಟರ್‌ವರೆಗೆ ಮಾತ್ರ ಟೋಲ್ ಸಂಗ್ರಹಿಸಲಾಗುತ್ತದೆ. ಜನರ ಬ್ಯಾಂಕ್ ಖಾತೆಯಿಂದಲೇ ಹಣ ನೇರವಾಗಿ ಕಡಿತವಾಗುತ್ತದೆ. ಇದರಿಂದ ಸಮಯದ ಜತೆಗೆ ಹಣದ ಉಳಿತಾಯವೂ ಆಗಲಿದೆ” ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು 2021ರಿಂದ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಿದ್ದು, ಇದರಿಂದ ಟೋಲ್‌ಗೇಟ್‌ಗಳಲ್ಲಿ ಜನರ ಅರ್ಧ ಸಮಯ ಉಳಿದಿದೆ. ಫಾಸ್ಟ್‌ಟ್ಯಾಗ್‌ನ ಪರಿಚಯವು ಈಗಾಗಲೇ ಟೋಲ್ ಪ್ಲಾಜಾಗಳಲ್ಲಿ ಸರಾಸರಿ ಕಾಯುವ ಸಮಯವನ್ನು 47 ಸೆಕೆಂಡ್‌ಗಳಿಗೆ ಕಡಿಮೆ ಮಾಡಿದ್ದು, ಇದು ಹಿಂದಿನ ಸರಾಸರಿ 714 ಸೆಕೆಂಡುಗಳಿಂದ ಗಮನಾರ್ಹ ಸುಧಾರಣೆಯಾಗಿದೆ. ಈಗ ಹೊಸ ವ್ಯವಸ್ಥೆ ಮೂಲಕ ಮತ್ತೊಂದು ಕ್ರಾಂತಿಗೆ ನಿತಿನ್ ಗಡ್ಕರಿ ಸಾಕ್ಷಿಯಾಗಲಿದ್ದಾರೆ.
ಏನಿದು ತಂತ್ರಜ್ಞಾನ?
ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ದೇಶಿಸಿರುವ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬಂದರೆ, ವಾಹನಗಳಿಗೆ ಜಿಪಿಎಸ್ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಜಿಪಿಎಸ್ ಯಂತ್ರವು ಉಪಗ್ರಹದೊಂದಿಗೆ ಸಂಪರ್ಕ ಹೊಂದಿರುತ್ತದೆ. ಇದರಿಂದಾಗಿ ನಮ್ಮ ವಾಹನವು ಯಾವ ಟೋಲ್ ರಸ್ತೆಗೆ ಪ್ರವೇಶ ಪಡೆದಿದೆ, ಯಾವ ರಸ್ತೆಯಿಂದ ನಿರ್ಗಮಿಸಿದೆ ಎಂಬುದನ್ನು ಲೆಕ್ಕ ಹಾಕಿ, ಬ್ಯಾಂಕ್ ಖಾತೆಯಿಂದ ಟೋಲ್ ಕಡಿತಗೊಳಿಸುತ್ತದೆ.
ವಾಹನ ಸವಾರರಿಗೆ ಉಪಯೋಗ ಹೇಗೆ?
ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯು ಜಾರಿಗೆ ಬಂದರೆ, ಭಾರತದಲ್ಲಿ ಸಮಯದ ಜತೆಗೆ ಹಣವನ್ನೂ ಉಳಿತಾಯ ಮಾಡಬಹುದಾಗಿದೆ. ಟೋಲ್ ಸಂಗ್ರಹ ಇರುವ ಹೆದ್ದಾರಿಯಲ್ಲಿ ನಾವು ಎಷ್ಟು ದೂರ ಕ್ರಮಿಸಿದ್ದೇವೋ, ಅಷ್ಟಕ್ಕೆ ಮಾತ್ರ ಟೋಲ್ ಶುಲ್ಕ ಪಾವತಿಸುತ್ತೇವೆ. ಟೋಲ್ ಗೇಟ್ ನಂತರ ಅರ್ಧ ಕಿಲೋಮೀಟರ್ ಇದ್ದರೂ, ಪೂರ್ತಿ ಹಣವನ್ನು ನಾವೀಗ ಪಾವತಿಸಬೇಕಾಗುತ್ತಿದೆ. ಆದರೆ, ಸ್ಯಾಟಲೈಟ್ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೆ ಬಂದರೆ, ಎಷ್ಟು ದೂರ ಕ್ರಮಿಸಿದ್ದೇವೋ, ಅಷ್ಟಕ್ಕೆ ಮಾತ್ರ ಹಣ ಪಾವತಿಸುತ್ತೇವೆ ಎಂದು ನಿತಿನ್ ಗಡ್ಕರಿ ಹೇಳಿದರು