ನವದೆಹಲಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಮೂರು ರಾಜ್ಯಗಳಲ್ಲಿ ನಡೆಸಿದ ದಾಳಿಯ ಬಳಿಕ ಓರ್ವ ಆರೋಪಿಯನ್ನು ಬಂಧಿಸಿದೆ.
ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್‌ಐಎ ತಂಡಗಳು ಭೇದಿಸಿದ ನಂತರ ದಾಳಿಯ ಸಂಚುಕೋರ ಮುಝಮ್ಮಿಲ್ ಶರೀಫ್‌ನನ್ನು ಬಂಧಿಸಿದೆ.
ಸ್ಫೋಟ ನಡೆಸಿದ ಪ್ರಮುಖ ಆರೋಪಿ ಮುಸ್ಸಾವಿರ್ ಶಜೀಬ್ ಹುಸೇನ್ ಮತ್ತು ಸಂಚುಕೋರ ಅಬ್ದುಲ್ ಮಥೀನ್‌ನನ್ನು ತನಿಖೆಯಿಂದ ಪತ್ತೆ ಹಚ್ಚಲಾಗಿತ್ತು. ಎನ್‌ಐಎಗೆ ಬೇಕಾಗಿರುವ ಈ ಆರೋಪಿಗಳು ಈಗ ಪರಾರಿಯಾಗಿದ್ದಾರೆ.
ಬಾಂಬರ್ ಮುಸ್ಸಾವಿರ್ ಶಜೀಬ್ ಹುಸೇನ್‌ಗೆ ಮುಝಮ್ಮಿಲ್ ಶರೀಫ್ ಲಾಜಿಸ್ಟಿಕ್ ಸಹಕಾರ ನೀಡಿದ್ದ ಎಂದು ಎನ್‌ಐಎ ಹೇಳಿದೆ.
ಈ ಮೂವರು ಆರೋಪಿಗಳ ಮನೆಗಳು ಹಾಗೂ ಇತರ ಶಂಕಿತರ ಮನೆಗಳು ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ತಪಾಸಣೆಯ ವೇಳೆ ನಗದು ಸಹಿತ ವಿವಿಧ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಮತ್ತು ಸ್ಫೋಟದ ಹಿಂದಿನ ದೊಡ್ಡ ಪಿತೂರಿಯನ್ನು ಬಯಲಿಗೆಳೆಯುವ ಪ್ರಯತ್ನಗಳು ನಡೆಯುತ್ತಿದೆ ಎಂದು ಎನ್‌ಐಎ ತನ್ನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.