ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಿಂದ ಉಡುಪಿ ಜಿಲ್ಲೆಯ ಪೆರ್ಡೂರಿನ ಅನಂತಪದ್ಮನಾಭ ದೇವಾಲಯ ಉಳಿಸಬಹುದೇ ಎಂಬ ಬಗ್ಗೆ ಉತ್ತರ ನೀಡುವಂತೆ ಕರ್ನಾಟಕ ಹೈಕೋರ್ಟ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವನ್ನು ಕೇಳಿದೆ.
ಪೆರ್ಡೂರಿನ ರಂಜಿತ್ ಕುಮಾರ್ ಭೂಸ್ವಾಧೀನ ಕ್ರಮ ಆಕ್ಷೇಪಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು.
ಅರ್ಜಿದಾರರ ವಾದ ಆಲಿಸಿದ ಬಳಿಕ ನ್ಯಾಯಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರೂ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು.
ರಸ್ತೆ ವಿಸ್ತರಣೆ ಸಂದರ್ಭದಲ್ಲಿ ದೇವಾಲಯ ಸೇರಿದಂತೆ ಧಾರ್ಮಿಕ ಕಟ್ಟಡಗಳಿಗೆ ಧಕ್ಕೆ ಆಗುವುದಾದರೆ ಆ ವೇಳೆ ಸಂಬಂಧಿಸಿದ ಪ್ರಾಧಿಕಾರ ಪರ್ಯಾಯ ಮಾರ್ಗಗಳನ್ನು ಬಳಸಬಹುದು. ಈ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಆದೇಶ ನೀಡಿದೆ. ಹಾಗಾಗಿ, ಈ ಪ್ರಕರಣದಲ್ಲೂ ಸಚಿವಾಲಯ ಪರ್ಯಾಯ ಮಾರ್ಗದ ಬಗ್ಗೆ ಆಲೋಚಿಸಬೇಕು,” ಎಂದು ನ್ಯಾಯಾಲಯ ಹೇಳಿತು.
ಸಚಿವಾಲಯದ ಪರ ಹಾಜರಾದ ವಕೀಲ ಎಸ್. ರಾಜಶೇಖರ್, ”ದೇವಾಲಯದ ಜಾಗ ಬಿಟ್ಟು ಹೆದ್ದಾರಿ ವಿಸ್ತರಣೆ ಮಾಡಬಹುದೇ ಎಂಬ ಬಗ್ಗೆ ಮಾಹಿತಿ ಪಡೆದು ಮುಂದಿನ ವಿಚಾರಣೆ ವೇಳೆ ತಿಳಿಸಲಾಗುವುದು,” ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದಕ್ಕೂ ಮುನ್ನ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ ಕೃಷ್ಣ ಎಸ್. ವ್ಯಾಸ್, ”ಹೆದ್ದಾರಿ ವಿಸ್ತರಣೆಯಿಂದ ಪೆರ್ಡೂರಿನ ಐತಿಹಾಸಿಕ ಹಾಗೂ ಪ್ರಾಚೀನ ಅನಂತಪದ್ಮನಾಭ ದೇವಾಲಯಕ್ಕೆ ಧಕ್ಕೆಯಾಗಲಿದೆ. ದೇವಾಲಯದ ರಥಬೀದಿ, ನಾಗವನ ಜಾಗದಲ್ಲಿಯೇ ಹೆದ್ದಾರಿ ಬರಲಿದ್ದು, ಇದರಿಂದ ತೊಂದರೆಯಾಗಲಿದೆ. ದೇವಾಲಯದ ಮೂಲ ಸ್ವರೂಪ ಕಳೆದುಕೊಳ್ಳಲಿದೆ,” ಎಂದು ನ್ಯಾಯಪೀಠದ ಗಮನ ಸೆಳೆದರು.
“ಅಲ್ಲದೆ, ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದಾಗಲೇ ದೇವಾಲಯದ ಭಕ್ತರು ಆಕ್ಷೇಪ ವ್ಯಕ್ತಪಡಿಸಿ 2022ರ ಡಿ.19ರಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ, ಆ ಮನವಿ ಪರಿಗಣಿಸಿಲ್ಲ. ಹೆದ್ದಾರಿ ವಿಸ್ತರಣೆಯನ್ನು ಎನ್‌ಎಚ್‌ಎಐ ಹೊರಡಿಸಿರುವ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಕೈಗೆತ್ತಿಕೊಳ್ಳಲಾಗಿದೆ. ಹಾಗಾಗಿ, ಭಕ್ತರ ಮನವಿ ಪರಿಗಣಿಸಬೇಕು ಮತ್ತು ಹೆದ್ದಾರಿ ವಿಸ್ತರಣೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳುವಂತೆ ನಿರ್ದೇಶನ ನೀಡಬೇಕು,” ಎಂದು ನ್ಯಾಯಪೀಠವನ್ನು ಕೋರಿದರು.