ಬೆಂಗಳೂರು: ರಾಜ್ಯದಲ್ಲಿ 2023-24ನೇ ಸಾಲಿನ 5,8, 9ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲಾದ ಬೋರ್ಡ್ ಪರೀಕ್ಷೆಯನ್ನು ಫಲಿತಾಂಶವನ್ನು ಸುಪ್ರೀಂ ಕೋರ್ಟ್ ಅಸಿಂಧುವೆಂದು ಆದೇಶ ಹೊರಡಿಸಿದೆ. ಆದರೆ, ಫಲಿತಾಂಶ ಪ್ರಕಟಿಸಿದ ಶಿಕ್ಷಣೆ ಇಲಾಖೆ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಫಲಿತಾಂಶ ತಡೆಹಿಡಿದಿದ್ದರೂ, ಕೆಲವೊಂದು ಶಾಲೆಗಳು ಫಲಿತಾಂಶ ಪ್ರಕಟಿಸಿವೆ. ಆದರೆ, ಈಗ ಫಲಿತಾಂಶವೇ ಅಸಿಂಧುವೆಂದು ಕೋರ್ಟ್ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಮಕ್ಕಳನ್ನು ಮುಂದಿನ ತರಗತಿಗೆ ಯಾವ ಆಧಾರದಲ್ಲಿ ಅಡ್ಮಿಷನ್ ಮಾಡಬೇಕು ಎಂದು ಪೋಷಕರು ಕೂಡ ಸಂಕಷ್ಟ ಎದುರಿಸುತ್ತಿದ್ದಾರೆ.
ಹೌದು, 2023-24ನೇ ಸಾಲಿನ 5,8, 9ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲಾದ ಬೋರ್ಡ್ ಪರೀಕ್ಷೆಯಿಂದ ವಿದ್ಯಾರ್ಥಿಗಳು, ಪೋಷಕರು, ಶಾಲೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಣ ಇಲಾಖೆಯೂ ಕೂಡ ಸಂಕಷ್ಟಕ್ಕೆ ಸಿಲುಕಿವೆ. ಬೋರ್ಡ್ ಪರೀಕ್ಷೆ ನಡೆಸಬೇಕಾ ಅಥವಾ ಬೇಡವಾ ಎಂಬ ಗೊಂದಲದ ನಡುವೆಯೇ ಸರ್ಕಾರದಿಂದ ಬೋರ್ಡ್ ಪರೀಕ್ಷೆ ನಡೆಸಿರುವುದೇ ಎಲ್ಲರೂ ಸಂಕಷ್ಟಕ್ಕೆ ಸಿಲುಕಲು ಕಾರಣವಾಗಿದೆ. ಮಕ್ಕಳು ಪ್ರತಿ ವರ್ಷದಂತೆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಪರೀಕ್ಷೆ ಬರೆದು ಮುಂದಿನ ತರಗತಿಗೆ ಪ್ರವೇಶ ಪಡೆದು ಹೋಗುವವರಿದ್ದರು. ಆದರೆ, ಸರ್ಕಾರದ ನಿರ್ಧಾರ ಹಾಗೂ ಸುಪ್ರೀಂ ಕೋರ್ಟ್ ಆದೇಶದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈಗಾಗಲೇ ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಶಾಲೆಗಳಿಗೆ ಬೇಸಿಗೆ ರಜೆ ನೀಡಿದೆ. ಕೆಲ ಶಾಲೆಗಳು ಫಲಿತಾಂಶವನ್ನ ಪ್ರಕಟ ಮಾಡಿದೆ. ಪ್ರಕಟ ಮಾಡಿರುವ ಫಲಿತಾಂಶವನ್ನ ಕೋರ್ಟ್ ಅಸಿಂಧು ಅಂತ ಹೇಳಿದೆ. ಇದರಿಂದಾಗಿ ಶಿಕ್ಷಣ ಇಲಾಖೆಯು ಮುಂದಿನ ಶೈಕ್ಷಣಿಕ ವರ್ಷಕ್ಕೆ ಯಾವ ಅಂಕಗಳನ್ನು ಪರಿಗಣಿಸಬೇಕು ಅನ್ನೋ ಗೊಂದಲಕ್ಕೆ ಸಿಲುಕಿದೆ. ಮಕ್ಕಳ ಶಾಲಾ ಬದಲಾವಣೆಗೂ ಸಮಸ್ಯೆಯಾಗಿದೆ. ಇನ್ನು ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಬೇಕು ವರ್ಗಾವಣೆ ಪ್ರಮಾಣ ಪತ್ರ (ಟಿಸಿ) ಕೊಡುವಂತೆ ಕೇಳಿದರೂ ಇದಕ್ಕೆ ಸಮಸ್ಯೆ ಆಗುತ್ತಿದೆ.
ಈ ಬಗ್ಗೆ ಶಿಕ್ಷಣ ಇಲಾಖೆ ಮಾತ್ರ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿರುವ ಬಗ್ಗೆ ಮಾಹಿತಿ ನೀಡಿಲ್ಲ. ಪೋಷಕರು ಕೂಡ ಗೊಂದಲಕ್ಕೆ ಸಿಲುಕಿದ್ದಾರೆ. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಕೊಡಲಾಗಿದ್ದು, ಮತ್ತೊಂದೆಡೆ ಲೋಕಸಭಾ ಚುನಾವಣೆ ನಡೆಯುತ್ತಿದೆ. ಹೀಗಾಗಿ ಪರೀಕ್ಷೆ ಫಲಿತಾಂಶ ವಿಚಾರದಲ್ಲಿ ಗೊಂದಲ ಮಾಡಿಕೊಂಡಿರುವ ಶಿಕ್ಷಣ ಇಲಾಖೆಯು ಗೊಂದಲಕ್ಕೆ ಸಿಲುಕಿದೆ. ಮಕ್ಕಳು ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ಸೇರಲು ಟಿಸಿ ಸಹ ಕೊಡ್ತಿಲ್ಲ. ಹೀಗಾಗಿ ಮಕ್ಕಳ ಪ್ರೋಗ್ರೇಸ್ ಕಾರ್ಡ್ ರಿಪೋರ್ಟ್ ಸಿಗದೆ ಪೋಷಕರ ಪರದಾಡುತ್ತಿದ್ದಾರೆ.