ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಇಬ್ಬರು ಪ್ರಮುಖ ಆರೋಪಿಗಳನ್ನು ನಿನ್ನೆ ಶುಕ್ರವಾರ ಕೋಲ್ಕತ್ತಾದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
ಪಾತಕಿ ಮುಸಾವೀರ್ ಶಾಜೀಬ್ ಹುಸೇನ್ ಹಾಗೂ ಬಾಂಬ್ ಇಡುವ ಯೋಜನೆ ರೂಪಿಸಿದ್ದ ಪ್ರಧಾನ ಸೂತ್ರಧಾರಿ ಅಬ್ದುಲ್ ಮತೀನ್ ತಾಹಾನನ್ನು ರಾಷ್ಟ್ರೀಯ ತನಿಖಾ ದಳ ಕೋಲ್ಕತ್ತಾದಲ್ಲಿ ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಮತೀನ್, ತುಂಗಾತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಿದ್ದ. ಉಗ್ರ ಶಾರಿಕ್‌ಗೆ ಕುಕ್ಕರ್ ಕೊಟ್ಟು ಮಂಗಳೂರಿನಲ್ಲೂ ಸ್ಫೋಟ ಮಾಡಿಸಿದ್ದ. ಅದೇ ರೀತಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಡಲು ಮತೀನ್ ಮಸಲತ್ತು ಮಾಡಿದ್ದ ಎನ್ನುವುದು ಎನ್ಐಎ ತನಿಖೆಯಿಂದ ಹೊರಬಿದ್ದಿದೆ.
ಮತೀನ್ ನೀಡಿದ ಸೂಚನೆಯಂತೆ ಬಾಂಬ್ ಇಟ್ಟು ಎಸ್ಕೇಪ್ ಆಗಿದ್ದ ಬಾಂಬರ್ ಮುಸಾವಿರ್, ಸೀದಾ ಪಶ್ಚಿಮ ಬಂಗಾಳಕ್ಕೆ ಹೋಗಿದ್ದ. ಈತನಿಗಾಗಿ ಎನ್‌ಐಎ ಅಧಿಕಾರಿಗಳು, ಕರ್ನಾಟಕ, ಕೇರಳ, ತೆಲಂಗಾಣ ಸೇರಿದಂತೆ ಹಲವು ರಾಜ್ಯದಲ್ಲಿ ಶೋಧ ನಡೆಸಿದ್ರು. ಇಬ್ಬರು ಉಗ್ರರು ಪಶ್ಚಿಮ ಬಂಗಾಳದಲ್ಲಿ ಇದ್ದಾರೆಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಅಲರ್ಟ್ ಆದ ಎನ್ಐಎ ಉಗ್ರರಾದ ಮುಸಾವಿರ್ ಹುಸೇನ್ ಹಾಗೂ ಮತೀನ್ ತಾಹನನ್ನ ಬಂಧಿಸಿದೆ.
ಉಗ್ರರ ಬಳಿ ಕರ್ನಾಟಕದ ಇಬ್ಬರ ನಕಲಿ ಆಧಾರ ಕಾರ್ಡ್ ಪತ್ತೆ: ಇಬ್ಬರ ಬಂಧನ ಬಳಿಕ ಉಗ್ರರ ಬಳಿ ಕರ್ನಾಟಕದ ಇಬ್ಬರ ನಕಲಿ ಆಧಾರ ಕಾರ್ಡ್ ಪತ್ತೆಯಾಗಿವೆ. ಎನ್ಐಎ ಅಧಿಕಾರಿಗಳು ಉಗ್ರರನ್ನು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಬಂಧಿಸಿದ್ದು, ಆರೋಪಿಗಳ ಬಳಿ ಕಲಬುರಗಿಯ ಓರ್ವ ಯುವಕನ ನಕಲಿ ಆಧಾರ ಕಾರ್ಡ್ ಪತ್ತೆಯಾಗಿದೆ.
ಕಲಬುರಗಿಯ ವರ್ದಾನಗರ ನಿವಾಸಿಯಾಗಿರುವ ಅನಮೂಲ ಕುಲಕರ್ಣಿ ಎಂಬ ಯುವಕನ ನಕಲಿ ಆಧಾರ ಕಾರ್ಡ್ ಉಗ್ರರ ಬಳಿ ಇತ್ತು. ಟೆಕ್ಕಿ ಅನಮೂಲ ಕುಲಕರ್ಣಿ ಸದ್ಯ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉಗ್ರರಿಗೆ ಅನಮೂಲ ಕುಲಕರ್ಣಿ ಅವರ ಆಧಾರ ಕಾರ್ಡ್ ಸಿಕ್ಕಿದ್ದಾದರು ಹೇಗೆ? ಅನಮೂಲ ಕುಲಕರ್ಣಿ ಅವರ ಆಧಾರ ಕಾರ್ಡ್ ಅನ್ನು ಉಗ್ರರರು ಹೇಗೆ ಪಡೆದರು? ಹೀಗೆ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.