Connect with us

Hi, what are you looking for?

Diksoochi News

ಅರೆ ಹೌದಾ!

ಪ್ರವಾಸಿಗರೇ ಗಮನಿಸಿ: ಊಟಿ ಹೋಗಬೇಕಾದ್ರೆ ಇ-ಪಾಸ್‌ ಕಡ್ಡಾಯ!

0

ಚೆನ್ನೈ: ಊಟಿ ಮತ್ತು ಕೊಡೈಕೆನಾಲ್‌ಗೆ ತೆರಳುವ ಪ್ರವಾಸಿ ವಾಹನಗಳು ಮೇ 7ರಿಂದ ಇ-ಪಾಸ್‌  ಕಡ್ಡಾಯವಾಗಿ ಹೊಂದಿರಬೇಕೆಂದು ಮದ್ರಾಸ್‌ ಹೈಕೋರ್ಟ್‌ ಆದೇಶ ಪ್ರಕಟಿಸಿದೆ.

ಮೇ 7 ರಿಂದ ಜೂನ್‌ 30 ರವರೆಗೆ ಇ-ಪಾಸ್‌ ಹೊಂದಿರುವ ಪ್ರವಾಸಿ ವಾಹನಗಳಿಗೆ ಮಾತ್ರ ಊಟಿ ಮತ್ತು ಕೊಡೈಕನಲ್‌ ಪ್ರವೇಶಕ್ಕೆ ಅನುಮತಿ ನೀಡುವಂತೆ ನೀಲಗಿರಿ ಮತ್ತು ದಿಂಡಿಗಲ್‌ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ.

ಎಲ್ಲಾ ಮೋಟಾರು ವಾಹನಗಳು ಇ-ಪಾಸ್‌ಗಳನ್ನು ಪಡೆಯಬೇಕು. ಬೇಸಿಗೆಯಲ್ಲಿ ಎರಡು ಗಿರಿಧಾಮಗಳಿಗೆ ಪ್ರವೇಶಿಸುವ ವಾಹನಗಳ ಸಂಖ್ಯೆ ಮತ್ತು ವಿಧಗಳು, ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯ ಡೇಟಾವನ್ನು ಸಂಗ್ರಹಿಸಲು ಜಿಲ್ಲಾಡಳಿತಗಳಿಗೆ ಇದರಿಂದ ಸಹಾಯವಾಗಲಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement. Scroll to continue reading.

ನ್ಯಾಯಮೂರ್ತಿಗಳಾದ ಎನ್.ಸತೀಶ್ ಕುಮಾರ್ ಮತ್ತು ಡಿ.ಭರತ ಚಕ್ರವರ್ತಿ ಅವರಿದ್ದ ವಿಶೇಷ ವಿಭಾಗೀಯ ಪೀಠ ಇ-ಪಾಸ್‌ ವಿತರಣೆಗೆ ನೀಲಗಿರಿ ಮತ್ತು ದಿಂಡಿಗಲ್ ಜಿಲ್ಲಾಡಳಿತಕ್ಕೆ ಯಾವುದೇ ಮಿತಿ ಹೇರಿಲ್ಲ. ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಇ-ಪಾಸ್‌ನಿಂದ ವಿನಾಯಿತಿ ನೀಡಬೇಕು. ಇ-ಪಾಸ್ ವ್ಯವಸ್ಥೆಗೆ ವ್ಯಾಪಕ ಪ್ರಚಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ವಾಹನದ ವರ್ಗ, ಪ್ರಯಾಣಿಸುವವರ ಒಟ್ಟು ಸಂಖ್ಯೆ, ಹಗಲಿನಲ್ಲಿ ಪ್ರಯಾಣ ಮಾಡುತ್ತಿದ್ದಾರಾ ಅಥವಾ ರಾತ್ರಿಯಲ್ಲಿ ತಂಗಲು ಉದ್ದೇಶಿಸಿದ್ದಾರಾ ಎಂಬಿತ್ಯಾದಿ ಮಾಹಿತಿಗಳನ್ನು ಸಾಧ್ಯವಾದಷ್ಟು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪೀಠ ನಿರ್ದೇಶನ ನೀಡಿದೆ. 

ಇಬ್ಬರು ಜಿಲ್ಲಾಧಿಕಾರಿಗಳು ಮಾಹಿತಿ ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಇ-ಪಾಸ್ ವ್ಯವಸ್ಥೆಗೆ ಪಾವತಿ ಗೇಟ್‌ವೇಯನ್ನು ಲಿಂಕ್ ಮಾಡಬೇಕು. ಅರ್ಜಿದಾರರು ಆನ್‌ಲೈನ್‌ನಲ್ಲಿ ಟೋಲ್ ಶುಲ್ಕವನ್ನು ಪಾವತಿಸಬೇಕು. ಇದರಿಂದ ಚೆಕ್ ಪೋಸ್ಟ್‌ಗಳ ಬಳಿ ಗಂಟೆಗಟ್ಟಲೇ ವಾಹನಗಳ ಸರತಿ ಸಾಲು ತಪ್ಪುತ್ತದೆ. ಇಂಧನ ಉಳಿತಾಯವಾಗುತ್ತದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಎಂಟು ಚೆಕ್ ಪೋಸ್ಟ್‌ಗಳ ಮೂಲಕ ಪ್ರತಿದಿನ ಸರಿಸುಮಾರು 20 ಸಾವಿರ ವಾಹನಗಳು (11,500 ಕಾರುಗಳು, 1,300 ವ್ಯಾನ್‌ಗಳು, 600 ಬಸ್‌ಗಳು ಮತ್ತು 6,500 ದ್ವಿಚಕ್ರ ವಾಹನಗಳು) ನೀಲಗಿರಿ ಪ್ರವೇಶಿಸುತ್ತವೆ ಎಂದು ರಾಜ್ಯ ಸರ್ಕಾರ ಸಲ್ಲಿಸಿದ ಸ್ಥಿತಿ ವರದಿಯನ್ನು ಓದಿ ನ್ಯಾಯಾಧೀಶರು ಆತಂಕ ವ್ಯಕ್ತಪಡಿಸಿದರು. ಇಷ್ಟು ವಾಹನ ದಟ್ಟಣೆ ಇರುವಾಗ ಆನೆಗಳು ರಸ್ತೆಗಳನ್ನು ದಾಟಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.

Advertisement. Scroll to continue reading.

ಈಗ ಊಟಿಯಲ್ಲಿ ಬರಗಾಲ ಬಂದಿದೆ. ಅಲ್ಲಿನ ನಿವಾಸಿಗಳು ನೀರಿಗಾಗಿ ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಪ್ರವಾಸಿಗರಿಗೆ ಹೇಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ನ್ಯಾಯಮೂರ್ತಿ ಚಕ್ರವರ್ತಿ ಕಳವಳ ವ್ಯಕ್ತಪಡಿಸಿದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!