ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು(60) ಅವರು ರಂಗಸ್ಥಳದಲ್ಲಿ ತನ್ನ ಪಾತ್ರ ನಿರ್ವಹಣೆ ಮುಗಿಸಿ ವೇಷ ಕಳಚುವ ಸಂದರ್ಭದಲ್ಲಿ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಉಡುಪಿ ಜಿಲ್ಲೆಯ ಕೋಟದಲ್ಲಿ ಬುಧವಾರ ರಾತ್ರಿ ನಡೆದಿದೆ.
ತೆಂಕು ತಿಟ್ಟು ಯಕ್ಷಗಾನದ ಪ್ರಾತಿನಿಧಿಕ ಮೇಳ ಎಂದೇ ಜನಜನಿತವಾಗಿರುವ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯಲ್ಲಿ ಕಳೆದ 42 ವರ್ಷಗಳಿಂದ ಕಲಾಸೇವೆ ಮಾಡುತ್ತಿದ್ದ ಅವರು ಯಾವ ಪಾತ್ರವನ್ನೂ ಲೀಲಾಜಾಲವಾಗಿ ನಿರ್ವಹಿಸುತ್ತಿದ್ದ ಅಪರೂಪದ ಕಲಾವಿದ. ಬುಧವಾರ ರಾತ್ರಿ ಕೋಟ ಗಾಂಧಿ ಮೈದಾನದಲ್ಲಿ ನಡೆದ ಧರ್ಮಸ್ಥಳ ಕ್ಷೇತ್ರ ಮಹಾತ್ಮೇೆಯ ಕುಕ್ಕಿತ್ತಾಯ ದೈವದ ಪಾತ್ರ ನಿರ್ವಹಿಸಿ, ಚೌಕಿಗೆ ಮರಳಿ ವೇಷ ಕಳಚಿಟ್ಟು ಮುಖವರ್ಣಿಕೆಯನ್ನು ತೆಗೆಯುವ ವೇಳೆ ತೀವ್ರ ಹೃದಯಾಘಾತದಿಂದ ನಿಧನರಾದರು. ಚೌಕಿಯಲ್ಲಿ ಮಂಗಳ ಪದ ಆಗುತ್ತಿದ್ದ ವೇಳೆಗೆ ಈ ಘಟನೆ ನಡೆದಿದೆ.
ಅವರಿಗೆ ಪತ್ನಿ ಕುಶಾಲಾಕ್ಷಿ, ಪುತ್ರ ಜ್ಞಾನೇಶ್, ಬಂಧು ಬಳಗ, ಅಪಾರ ಅಭಿಮಾನಿಗಳು ಇದ್ದಾರೆ. ಸವ್ಯಸಾಚಿ ಕಲಾವಿದರಾಗಿದ್ದ ಅವರ ಅಕಾಲಿಕ ಮತ್ತು ಅನಿರೀಕ್ಷಿತ ಸಾವಿಗೆ ಯಕ್ಷಗಾನ ಕಲಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
1964ನೇ ಇಸ್ವಿ ಆಗಸ್ಟ್ 12ರಂದು ಪುತ್ತೂರು ತಾಲೂಕು ಕೋಡಿಂಬಾಡಿ ಸಮೀಪ ಸೇಡಿಯಾಪು ಎಂಬಲ್ಲಿ ನಾರಾಯಣಯ್ಯ ಮತ್ತು ಲಕ್ಷ್ಮಿ ಅಮ್ಮ ದಂಪತಿಗೆ ಪುತ್ರನಾಗಿ ಜನಿಸಿದ ಗಂಗಾಧರ ಜೋಗಿಯವರು ಕೋಡಿಂಬಾಡಿ ಶಾಲೆಯಲ್ಲಿ 7ನೇ ತರಗತಿಯ ವರೇಗೆ ಓದಿದರು. ಎಳವೆಯಲ್ಲೇ ಇವರಿಗೆ ಯಕ್ಷಗಾನಾಸಕ್ತಿ ಅತೀವವಾಗಿತ್ತು. ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ 1981ರಲ್ಲಿ ತರಬೇತಿ ಪಡೆದು ಧರ್ಮಸ್ಥಳ ಮೇಳಕ್ಕೆ ಬಾಲಕಲಾವಿದನಾಗಿ ಸೇರ್ಪಡೆಯಾದರು. ಬಾಲಗೋಪಾಲ ವೇಷದಿಂದ ಹಿಡಿದು ತನ್ನ ಪಾಲಿಗೆ ಬಂದ ಪಾತ್ರಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾ ಹಂತ ಹಂತವಾಗಿ ಬೆಳೆದರು.