ಬೆಂಗಳೂರು: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ಕಾಂಗ್ರೆಸ್ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ರಾಷ್ಟ್ರೀಯ ಪಕ್ಷ ಭಾನುವಾರ ತಿಳಿಸಿದೆ. ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲಾ ಇದನ್ನು ಪ್ರಕಟಿಸಿದರು.
ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ ಎಂದ ಅವರು, ‘ಕಳೆದ 75 ವರ್ಷಗಳಲ್ಲಿ ಎಂದೂ ನಡೆಯದ ವಿಶಿಷ್ಟ ಪ್ರಕರಣ ಇದಾಗಿದ್ದು, ನೂರಾರು ಅತ್ಯಾಚಾರ ಸಂತ್ರಸ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಥಿಕ ನೆರವು ಘೋಷಿಸಿದ್ದಾರೆ ಎಂದು ಸುರ್ಜಿವಾಲ ತಿಳಿಸಿದರು.
ಅತ್ಯಾಚಾರ ಮತ್ತು ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನೂರಾರು ಸ್ಪಷ್ಟ ವೀಡಿಯೊಗಳು ಬಹಿರಂಗಗೊಂಡ ನಂತರ ಪ್ರಜ್ವಲ್ ರೇವಣ್ಣ ತನಿಖೆಗೆ ಬೇಕಾಗಿದ್ದಾರೆ. ಮಾಸ್ ರೆಪಿಸ್ಟ್ ಪ್ರಜ್ವಲ್ ರೇವಣ್ಣ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ರಕ್ಷಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆರೋಪಿಸಿದರು.
ಪ್ರಜ್ವಲ್ ಬಗ್ಗೆ ಮಾಹಿತಿ ಇದ್ದರೂ ಬಿಜೆಪಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು ಏಕೆ? ಆರೋಪಿ ವಿದೇಶಕ್ಕೆ ಹೋಗುವುದನ್ನು ವಿದೇಶಾಂಗ ಸಚಿವಾಲಯ ಏಕೆ ತಡೆಯಲಿಲ್ಲ ಎಂದು ಅವರು ಪ್ರಶ್ನಿಸಿದರು.”ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ನ್ನು ಪ್ರಧಾನಿ ಏಕೆ ರದ್ದುಗೊಳಿಸಲಿಲ್ಲ? ಅವರನ್ನು ದೇಶಕ್ಕೆ ಕರೆತರಲು ಇಂಟರ್‌ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ ಏಕೆ ನೀಡಲಿಲ್ಲ?” ಎಂದು ಸುರ್ಜೇವಾಲ ಕಿಡಿಕಾರಿದರು.
ಈ ವೇಳೆ ಮಾತನಾಡಿದ ಸಿಎಂ, ಪ್ರಜ್ವಲ್ ಅವರನ್ನು ವಾಪಸ್ ಕರೆತರಲು ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದರು.