ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರವು ಭಾರತದೊಂದಿಗೆ ವಿಲೀನವಾಗಲಿದೆ ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, “ಪಾಕಿಸ್ತಾನ ಏನೂ ಬಳೆ ತೊಟ್ಟಿಕೊಂಡಿಲ್ಲ. ನಮ್ಮ ಮೇಲೆ ಎಸೆಯಲು ಅವರ ಬಳಿಯೂ ಆಟಂ ಬಾಂಬ್ ಇದೆ” ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ರಕ್ಷಣಾ ಸಚಿವರು ಇದನ್ನು ಹೇಳುತ್ತಿದ್ದಾರೆ ಎಂದರೆ, ಮುಂದುವರಿಯಿರಿ. ನಿಮ್ಮನ್ನು ತಡೆಯಲು ನಾವು ಯಾರು? ಆದರೆ ನೆನಪಿಡಿ, ಅವರು (ಪಾಕಿಸ್ತಾನ) ಕೂಡ ಬಳೆ ತೊಟ್ಟುಕೊಂಡಿಲ್ಲ. ಅದರ ಬಳಿ ಅಣು ಬಾಂಬ್‌ಗಳಿವೆ. ದುರದೃಷ್ಟವಶಾತ್ ಆ ಅಣು ಬಾಂಬ್ ನಮ್ಮ ಮೇಲೆಯೇ ಬೀಳುತ್ತವೆ” ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ರಾಜನಾಥ್ ಸಿಂಗ್ ಹೇಳಿದ್ದೇನು?
ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಜನಾಥ್ ಸಿಂಗ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ವಶಪಡಿಸಿಕೊಳ್ಳಲು ಸೇನಾ ಬಲ ಪ್ರಯೋಗಿಸುವ ಅಗತ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವ ಅಭಿವೃದ್ಧಿಗಳನ್ನು ಕಂಡು ಅಲ್ಲಿನ ಜನರೇ ಭಾರತದ ಭಾಗವಾಗಲು ಬಯಸುತ್ತಾರೆ ಎಂದು ಹೇಳಿದ್ದರು.
ನನ್ನ ಪ್ರಕಾರ, ಭಾರತ ಏನೂ ಮಾಡುವುದು ಬೇಕಿಲ್ಲ. ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಸನ್ನಿವೇಶದ ಬದಲಾದ ರೀತಿಗೆ, ಈ ಪ್ರದೇಶವು ಕಾಣುತ್ತಿರುವ ಆರ್ಥಿಕ ಪ್ರಗತಿಗೆ ಮತ್ತು ಇಲ್ಲಿ ಶಾಂತಿ ಮರಳಿರುವ ರೀತಿಯನ್ನು ಕಂಡಾಗ, ಭಾರತದ ಜತೆ ವಿಲೀನಗೊಳ್ಳಬೇಕು ಎಂಬ ಬೇಡಿಕೆ ಪಿಒಕೆ ಜನರಿಂದಲೇ ಬರುತ್ತದೆ” ಎಂದು ಸಿಂಗ್ ತಿಳಿಸಿದ್ದರು.
“ನಾವು ಭಾರತದೊಂದಿಗೆ ಸೇರಬೇಕು ಎಂದು ಸ್ವತಃ ಜನರೇ ಹೇಳುವುದರಿಂದ ನಾವು ಪಿಒಕೆಯನ್ನು ವಶಪಡಿಸಿಕೊಳ್ಳಲು ಬಲ ಪ್ರಯೋಗಿಸುವ ಅಗತ್ಯ ಬಾರದು. ಅಂತಹ ಬೇಡಿಕೆಗಳು ಬರುತ್ತಿವೆ” ಎಂದು ರಾಜನಾಥ್ ಸಿಂಗ್, ‘ಪಿಒಕೆ ಹಿಂದೆ, ಈಗ ಮತ್ತು ಎಂದೆಂದಿಗೂ ನಮ್ಮದೇ’ ಎಂಬುದನ್ನು ಪುನರುಚ್ಚರಿಸಿದ್ದರು.