ನವದೆಹಲಿ: ನೇಪಾಳ ತನ್ನ ಹೊಸ 100 ರೂ. ನೋಟುಗಳ ಮೇಲೆ ಭಾರತದ 3 ಗಡಿ ಪ್ರದೇಶಗಳಾದ ಲಿಪುರೇಖ್, ಲಿಂಪಿಯಾಧುರಾ, ಕಾಲಾಪಾನಿಯನ್ನು ತೋರಿಸುವ ನಕ್ಷೆಯನ್ನು ಮುದ್ರಣ ಮಾಡಲು ನಿರ್ಧಾರ ಮಾಡಿದೆ. ಭಾರತವು ಆ ಎಲ್ಲಾ 3 ಪ್ರದೇಶಗಳು ತನಗೆ ಸೇರಿದ್ದು ಎಂದು ಈ ಹಿಂದೆಯೂ ಸಮರ್ಥಿಸಿಕೊಂಡಿತ್ತು.
ಭಾರತದೊಂದಿಗಿನ ವಿವಾದದ ನಡುವೆ ನೇಪಾಳವು ತನ್ನ ಭೂಪ್ರದೇಶದ ಭಾಗವಾಗಿ ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಾಲಾಪಾನಿಯನ್ನು ಚಿತ್ರಿಸುವ ನಕ್ಷೆಯೊಂದಿಗೆ ದೇಶದಲ್ಲಿ ಹೊಸ 100 ರೂಪಾಯಿ ಕರೆನ್ಸಿ ನೋಟನ್ನು ಮುದ್ರಿಸಲು ನಿರ್ಧರಿಸಿದೆ. ಈ ಮೊದಲು 2020ರ ಜೂನ್ 18ರಂದು ನೇಪಾಳ ತನ್ನ ಸಂವಿಧಾನವನ್ನು ಬದಲಾಯಿಸುವ ಮೂಲಕ 3 ವಿವಾದಿತ ಪ್ರದೇಶಗಳನ್ನು ಸೇರಿಸುವ ಮೂಲಕ ದೇಶದ ರಾಜಕೀಯ ನಕ್ಷೆಯನ್ನು ನವೀಕರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು. ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಭಾರತ ಆ ಮೂರು ವಿವಾದಿತ ಪ್ರದೇಶಗಳು ನಮ್ಮ ದೇಶಕ್ಕೆ ಸೇರಿದ್ದು ಎಂದು ಹೇಳಿತ್ತು.
ಹೊಸ ಕರೆನ್ಸಿ ನೋಟು ಮುದ್ರಣದ ನಿರ್ಧಾರವನ್ನು ಪ್ರಕಟಿಸಿದ ನೇಪಾಳದ ಮಾಹಿತಿ ಮತ್ತು ಸಂವಹನ ಸಚಿವೆ ರೇಖಾ ಶರ್ಮ, ಪ್ರಧಾನಿ ಪುಷ್ಪಕಮಲ್ ದಹಾಲ್ ಅಧ್ಯಕ್ಷತೆಯ ಮಂತ್ರಿ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಪುಷ್ಪಕಮಲ್ ದಹಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಂತ್ರಿ ಮಂಡಳಿಯ ಸಭೆಯು ನೇಪಾಳದ ಹೊಸ ನಕ್ಷೆಯನ್ನು ಮುದ್ರಿಸಲು ನಿರ್ಧರಿಸಿತು. ಇದರಲ್ಲಿ 100 ರೂ. ಮುಖಬೆಲೆಯ ಬ್ಯಾಂಕ್ ನೋಟುಗಳಲ್ಲಿ ಲಿಪುಲೇಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ಸೇರಿವೆ. ಏಪ್ರಿಲ್ 25 ಮತ್ತು ಮೇ 2 ರಂದು ನಡೆದ ಕ್ಯಾಬಿನೆಟ್ ಸಭೆಗಳಲ್ಲಿ 100 ರೂಪಾಯಿಗಳ ನೋಟನ್ನು ಮರು ವಿನ್ಯಾಸಗೊಳಿಸಲು ಮತ್ತು ಬ್ಯಾಂಕ್ ನೋಟಿನಲ್ಲಿ ಮುದ್ರಿಸಲಾದ ಹಳೆಯ ನಕ್ಷೆಯನ್ನು ಬದಲಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ರೇಖಾ ಶರ್ಮ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ನೇಪಾಳವು ಐದು ಭಾರತೀಯ ರಾಜ್ಯಗಳೊಂದಿಗೆ 1,850 ಕಿಮೀ ಗಡಿಯನ್ನು ಹಂಚಿಕೊಂಡಿದೆ. ಅವುಗಳಲ್ಲಿ ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ಸೇರಿವೆ. 2023ರ ಜೂನ್ನಲ್ಲಿ ನೇಪಾಳದ ಪ್ರಧಾನಿ ಪುಷ್ಪಕಮಲ್ ದಹಾಲ್ ‘ಪ್ರಚಂಡ’ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವಾಗ ಸ್ನೇಹದ ಮನೋಭಾವದ ಅಡಿಯಲ್ಲಿ ಗಡಿ ವಿವಾದವನ್ನು ಪರಿಹರಿಸಲು ಪ್ರತಿಜ್ಞೆ ಮಾಡಿದ್ದರು. ಆದರೆ, ಇಲ್ಲಿಯವರೆಗೆ ಅದರ ಬಗ್ಗೆ ಯಾವ ಸೂಚನೆಯೂ ಕಂಡುಬಂದಿಲ್ಲ.