ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದ ದೈತ್ಯ ಕ್ರೀಡಾ ಸರಕು ತಯಾರಿಕಾ ಸಂಸ್ಥೆ ಅಡಿಡಾಸ್ ಇಂಡಿಯಾ, ಮುಂಬರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾದ ನೂತನ ಸಮವಸ್ತ್ರವನ್ನು ಅನಾವರಣ ಪಡಿಸಿದೆ. ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಣ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಕ್ಕೂ ಮುನ್ನ ಅಡಿಡಾಸ್ ಇಂಡಿಯಾ ನೂತನ ಸಮವಸ್ತ್ರ ಬಿಡುಗಡೆ ಮಾಡಿದೆ.
ಅಡಿಡಾಸ್ ಇಂಡಿಯಾ ಹಂಚಿಕೊಂಡ ವಿಡಿಯೋದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಮತ್ತು ಕುಲ್ದೀಪ್ ಯಾದವ್ ಅವರನ್ನು ಕಾಣಬಹುದಾಗಿದೆ. ಗ್ರಾಫಿಕ್ಸ್ ಮೂಲಕ ಭಾರತ ತಂಡದ ನೂತನ ಸಮವಸ್ತ್ರದ ಮಾದರಿಯನ್ನು ಹೆಲಿಕಾಪ್ಟರ್ ಮೂಲಕ ಕ್ರೀಡಾಂಗಣದ ಮೇಲೆ ಹಾರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ನೀಲಿ ಬಣ್ಣ ಹೆಚ್ಚಿರುವ ನೂತನ ಸಮವಸ್ತರದಲ್ಲಿ ಭುಜಗಳಿಗೆ ಕೇಸರಿ ಬಣ್ಣ ನೀಡಲಾಗಿದೆ. ಇನ್ನು ಈ ಹೊಸ ಜರ್ಸಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಮಿಶ್ರ ಅಭಿಪ್ರಾಯ ಹೊರಬಿದ್ದಿದೆ.
ಜೂನ್ 1ರಂದು ಶುರುವಾಗಲಿರುವ ಟೂರ್ನಿಯಲ್ಲಿ ಭಾರತ ತಂಡ ಜೂನ್ 5ರಂದು ಐರ್ಲೆಂಡ್ ಎದುರು ತನ್ನ ಅಭಿಯಾನ ಆರಂಭಿಸಲಿದೆ. ಇಡೀ ಕ್ರಿಕೆಟ್ ಜಗತ್ತು ಬಹಳಾ ಕಾತುರದಿಂದ ಎದುರು ನೋಡುತ್ತಿರುವ ಹೈ ವೋಲ್ಟೇಜ್ ಇಂಡಿಯಾ – ಪಾಕಿಸ್ತಾನ ಪಂದ್ಯ ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಮಹತ್ವದ ಟೂರ್ನಿಯಲ್ಲಿ ಭಾರತದ ಟಿ209 ವಿಶ್ವಕಪ್ ತಂಡ ಹೊಸ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.