ಬೆಂಗಳೂರು: ಕರ್ನಾಟಕದ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 631204 ವಿದ್ಯಾರ್ಥಿಗಳು ಪಾಸಾಗಿದ್ದಾರೆ, ರಾಜ್ಯಾದ್ಯಂತ ಶೇ.76.91ರಷ್ಟು ಫಲಿತಾಂಶ ದಾಖಲಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದೆ. ಯಾದಗಿರಿ ಕೊನೆಯ ಸ್ಥಾನದಲ್ಲಿದೆ.
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ.94 ಫಲಿತಾಂಶ ಪಡೆದು ಮೊದಲ ಸ್ಥಾನದಲ್ಲಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನ ಹಾಗೂ ಶಿವಮೊಗ್ಗ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆ 92.12%, ಶಿವಮೊಗ್ಗ ಜಿಲ್ಲೆ 88.67%, ಕೊಡಗು ಜಿಲ್ಲೆ 88.67% ಫಲಿತಾಂಶ ಪಡೆದಿದೆ.
ಪರೀಕ್ಷೆಯಲ್ಲಿ ಬಾಗಲಕೋಟೆಯ ಅಂಕಿತಾ ಬಸಪ್ಪ ಮೊದಲನೇ ಸ್ಥಾನಗಳಿಸಿದ್ದಾರೆ. ಬೆಂಗಳೂರಿನ ಮೇದಾ ಪಿ ಶೆಟ್ಟಿ ಎರಡನೇ ಸ್ಥಾನ ಪಡೆದಿದ್ದಾರೆ.
ಕಳೆದ ಸಾಲಿನಲ್ಲಿ ಉಡುಪಿ ಜಿಲ್ಲೆ 18ನೇ ಸ್ಥಾನ ಪಡೆದಿತ್ತು, ಕಾರ್ಕಳ ತಾಲೂಕಿನ ಜ್ಞಾನಸುಧಾ ವಿದ್ಯಾರ್ಥಿನಿ ಸಹನಾ 623 ಅಂಕ ಪಡೆದು ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೈಲುಗೈ ಸಾಧಿಸಿದ್ದಾರೆ.
2023-24ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಚೆಕ್ ಮಾಡಲು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ನೀಡಿರುವ ಅಧಿಕೃತ ವೆಬ್‌ಸೈಟ್ ವಿಳಾಸ https://karresults.nic.in ಗೆ ಭೇಟಿ ನೀಡಬೇಕು.
8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು: ಕರ್ನಾಟಕದಲ್ಲಿ ಈ ಸಲ ಎಸ್ಎಸ್‌ಎಲ್‌ಸಿ ಪರೀಕ್ಷೆಗೆ 8.69 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 4.41 ಲಕ್ಷ ಬಾಲಕರು, 4.28 ಬಾಲಕಿಯರು. ಅಲ್ಲದೆ, 18,225 ಖಾಸಗಿ ವಿದ್ಯಾರ್ಥಿಗಳು, 41,375 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 5,424 ವಿಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳು ಕರ್ನಾಟಕದ 2,750 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು.
ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲಾದ ಮಾರ್ಕ್ ಶೀಟ್ ತಾತ್ಕಾಲಿಕ: ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲಾದ ಆನ್‌ಲೈನ್ ಮಾರ್ಕ್ ಶೀಟ್ ತಾತ್ಕಾಲಿಕವಾಗಿರುವುದರಿಂದ, ವಿದ್ಯಾರ್ಥಿಗಳು ತಮ್ಮ ಶಾಲೆಗಳ ಅಧಿಕೃತ ಸೂಚನೆಯ ಪ್ರಕಾರ ಫಲಿತಾಂಶಗಳನ್ನು ಪ್ರಕಟಿಸಿದ ಕೆಲವು ದಿನಗಳ ನಂತರ ತಮ್ಮ ಶಾಲೆಗಳಿಂದ SSLC ಮಾರ್ಕ್‌ಶೀಟ್ ಪಡೆಯಬೇಕು.
ಪಾಸಾದರೂ ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ-2, ಪರೀಕ್ಷೆ-3ಕ್ಕೆ ಅವಕಾಶ: ವಿದ್ಯಾರ್ಥಿಗಳು ಪಾಸಾಗಲಿ ಅಥವಾ ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶವಿದೆ. ಪಾಸಾದರೂ ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದು.