ಬೆಂಗಳೂರು: ಲಕ್ನೋ ಸೂಪರ್ ಜಯಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ನಾಯಕ ಕೆಎಲ್ ರಾಹುಲ್ ನಡುವಣ ಆನ್‌ಫೀಲ್ಡ್ ಮಾತಿನ ಚಕಮಕಿ ಈಗ ತಾರಕಕ್ಕೆ ತಲುಪಿದೆ. ಈ ಬೆಳವಣಿಗೆಗೆ ಹತ್ತಿರದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಐಪಿಎಲ್ 2025 ಟೂರ್ನಿಗೂ ಮುನ್ನ ನಡೆಯಲಿರುವ ಆಟಗಾರರ ಹರಾಜಿಗೂ ಮುನ್ನ ಕೆಎಲ್ ರಾಹುಲ್ ಅವರನ್ನು ಎಲ್‌ಎಸ್‌ಜಿ ಫ್ರಾಂಚೈಸಿ ಉಳಿಸಿಕೊಳ್ಳುವುದಿಲ್ಲ ಎಂಬುದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಐಪಿಎಲ್ 2024 ಟೂರ್ನಿಯಲ್ಲಿ ಎಲ್‌ಎಸ್‌ಜಿ ತಂಡದ ಬಾಕಿ ಉಳಿದ 2 ಪಂದ್ಯಗಳಿಂದ ಕೆಎಲ್ ರಾಹುಲ್ ಹೊರಗುಳಿಯಲಿದ್ದು, ಹೊಸ ಕ್ಯಾಪ್ಟನ್‌ನೊಂದಿಗೆ ಜಯಂಟ್ಸ್ ತಂಡ ಆಡುವ ಸಾಧ್ಯತೆ ಇದೆ.
ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಕಿ ಲಕ್ನೋ ತಂಡ ಹೀನಾಯವಾಗಿ ಸೋಲನುಭವಿಸಿತ್ತು. ಈ ಹೀನಾಯ ಸೋಲನ್ನು ಎಲ್‌ಎಸ್‌ಜಿ ಮಾಲೀಕರು ಅರಗಿಸಿಕೊಳ್ಳಲು ಕಷ್ಟ ಪಟ್ಟಿದ್ದಾರೆ. ಇದೇ ಕಾರಣಕ್ಕೆ ಪಂದ್ಯ ಮುಗಿದ ಬೆನ್ನಲ್ಲೇ ಫೀಲ್ಡ್‌ಗೆ ಇಳಿದು ನಾಯಕ ಕೆಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಕ್ಯಾಪ್ಟನ್ ಮತ್ತು ಮಾಲೀಕರ ನಡುವೆ ವೈಮನಸ್ಸುಂಟಾಗಿದೆ ಎಂದು ವರದಿಗಳು ಹೇಳಿವೆ.
2022ರಲ್ಲಿ ಐಪಿಎಲ್ ಅಖಾಡಕ್ಕೆ ಕಾಲಿಟ್ಟ ಹೊಸ ಫ್ರಾಂಚೈಸಿ ಲಕ್ನೋ ಸೂಪರ್ ಜಯಂಟ್ಸ್ ತಂಡ ಕೆಎಲ್ ರಾಹುಲ್ ಅವರನ್ನು ಹರಾಜಿಗೂ ಮೊದಲೇ 17 ಕೋಟಿ ರೂ.ಗಳ ಭಾರಿ ಒಪ್ಪಂದ ಮೂಲಕ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಈಗ ಐಪಿಎಲ್ 2025 ಟೂರ್ನಿಯ ಹರಾಜಿಗೆ ರಾಹುಲ್‌ನ ಬಿಟ್ಟುಕೊಡಲು ಮುಂದಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಎದುರು ಎಲ್‌ಎಸ್‌ಜಿ ತನ್ನ ಮುಂದಿನ ಪಂದ್ಯ ಆಡಲಿದೆ. ಆ ಪಂದ್ಯಕ್ಕೆ ಇನ್ನು 5 ದಿನಗಳು ಬಾಕಿಯಿದ್ದು, ಈ ಸಮಯದಲ್ಲಿ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಉಳಿದ ಎರಡೂ ಪಂದ್ಯಗಳಲ್ಲಿ ಕೆಎಲ್ ರಾಹುಲ್ ಕೇವಲ ತಮ್ಮ ಬ್ಯಾಟಿಂಗ್ ಕಡೆಗೆ ಮಾತ್ರವೇ ಗಮನ ನೀಡಲು ಬಯಸಿದ್ದಾರೆ ಎಂಬುದು ತಿಳಿದುಬಂದಿದೆ. ಅವರು ಕ್ಯಾಪ್ಟನ್ಸಿ ಬಿಟ್ಟುಕೊಟ್ಟರೆ ಟೀಮ್ ಮ್ಯಾನೇಜ್ಮೆಂಟ್‌ಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೆಸರು ಹೇಳಲು ಬಯಸದ ಐಪಿಎಲ್ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿವೆ.
ನಿಕೋಲಸ್ ಪೂರನ್ ಕ್ಯಾಪ್ಟನ್ ಆಗುವ ಸಾಧ್ಯತೆ
ಟೂರ್ನಿ ಮಧ್ಯದಲ್ಲಿ ಕೆಎಲ್ ರಾಹುಲ್ ಕ್ಯಾಪ್ಟನ್ಸಿ ಬಿಡುವ ನಿರ್ಧಾರ ಮಾಡಿದ್ದೇ ಆದರೆ ಉಪನಾಯಕನ ಜವಾಬ್ದಾರಿ ಹೊತ್ತಿರುವ ವೆಸ್ಟ್ ಇಂಡೀಸ್ ತಾರೆ ನಿಕೋಲಸ್ ಪೂರನ್ ತಂಡದ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಎಲ್‌ಎಸ್‌ಜಿ ಪರ ನಿಕೋಲಸ್ ಪೂರನ್ ಅತ್ಯಂತ ಸ್ಥಿರ ಪ್ರದರ್ಶನ ಕಾಯ್ದುಕೊಂಡ ಬ್ಯಾಟರ್ ಆಗಿದ್ದಾರೆ.