ನವದೆಹಲಿ: ಬಿಹಾರದ ಮಾಜಿ ಡಿಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಸುಶೀಲ್ ಮೋದಿ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಆರು ತಿಂಗಳ ಹಿಂದೆಯೇ ತಮಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು ಎಂದು ಹೇಳಿಕೊಂಡಿದ್ದ ಸುಶೀಲ್ ಕುಮಾರ್ ಮೋದಿ ಅವರು, ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿರಲಿಲ್ಲ. ಅವರನ್ನು ಬಿಜೆಪಿ ತನ್ನ ರಾಜ್ಯದ ಸ್ಟಾರ್ ಪ್ರಚಾರಕರಲ್ಲಿ ಒಬ್ಬರು ಮತ್ತು ಚುನಾವಣಾ ಪ್ರಣಾಳಿಕೆ ಸಮಿತಿಯ ಸದಸ್ಯ ಎಂದು ಹೆಸರಿಸಿತ್ತು.
ಇದೇ ಏಪ್ರಿಲ್ ನಲ್ಲಿ ಸುಶೀಲ್ ಕುಮಾರ್ ಮೋದಿಯವರೇ ಖುದ್ದಾಗಿ ತಮ್ಮ ಅನಾರೋಗ್ಯದ ಬಗ್ಗೆ ಪ್ರಕಟಿಸಿದ್ದರು. ಈ ಕುರಿತಂತೆ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆಯನ್ನು ಹಾಕಿದ್ದ ಅವರು, ನನ್ನ ಅನಾರೋಗ್ಯದ ಬಗ್ಗೆ ನಾನಿಂದು ಬಹಿರಂಗವಾಗಿ ಹೇಳಿಕೊಳ್ಳುವ ಕಾಲ ಬಂದಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮಗೆ ವಹಿಸಲಾಗಿರುವ ಜವಾಬ್ದಾರಿಗಳಿಂದ ತಮ್ಮನ್ನು ತೆರವುಗೊಳಿಸುವಂತೆ ನಾನೀಗಾಗಲೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೋರಿದ್ದೇನೆ. ಬಿಹಾರಕ್ಕೆ, ಈ ದೇಶಕ್ಕೆ ಹಾಗೂ ನನ್ನ ಭಾರತೀಯ ಜನತಾ ಪಾರ್ಟಿಗೆ ನನ್ನ ಧನ್ಯವಾದಗಳು’’ ಎಂದು ತಿಳಿಸಿದ್ದರು.
ಮೂಲಗಳ ಪ್ರಕಾರ, ಅವರಿಗೆ ಕ್ಯಾನ್ಸರ್ ಇರುವುದು ಸುಮಾರು ಮೂವತ್ತು ವರ್ಷಗಳ ಹಿಂದೆಯೇ ತಿಳಿದಿತ್ತು. ಅದರ ನಡುವೆಯೇ ಅವರು ಜನಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿದ್ದರು. ಶಾಸಕರಾಗಿ, ಎಂಎಲ್ ಸಿಯಾಗಿ, ಲೋಕಸಭಾ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ ಜನಪ್ರತಿನಿಧಿಯ ನಾನಾ ಸ್ತರಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.
ಲಾಲು ಪ್ರಸಾದ್ ಗೆ ಸಿಂಹಸ್ವಪ್ನವಾಗಿದ್ದ ಸುಶೀಲ್
ಬಿಹಾರದ ಲಾಲೂ ಪ್ರಸಾದ್ ಯಾದವ್ ಅವರ ಕುಖ್ಯಾತ ಮೇವು ಹಗರಣವನ್ನು ಮೊದಲು ನ್ಯಾಯಾಲಯದ ಕಟಕಟೆಗೆ ತಂದಿದ್ದು ಇವರೇ. 2004ರಲ್ಲಿ ಪಾಟ್ನಾ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಿದ್ದ ಸುಶೀಲ್ ಮೋದಿ, ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಅವರ ಅಧಿಕಾರಾವಧಿಯಲ್ಲಿ ನಡೆದಿದ್ದ ಮೇವು ಅನುದಾನ ದುರ್ಬಳಕೆ ಕುರಿತಾಗಿ ಪ್ರಕರಣ ದಾಖಲಿಸಿದ್ದರು.ಇದು ಆನಂತರ ತನಿಖೆಗೊಳಪಟ್ಟು, ದೊಡ್ಡ ಕರ್ಮಕಾಂಡವೇ ಬಯಲಾಗಿತ್ತು. ಆನಂತರ ಇದು ‘ಬಿಹಾರದ ಮೇವು ಹಗರಣ’ ಎಂದೇ ಕುಖ್ಯಾತಿ ಪಡೆಯಿತು.
ಸುಶೀಲ್ ಕುಮಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.