ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಲ್ಲೆ ಆರೋಪ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಗೆ ಬೆದರಿಕೆ ಹಾಕಿ ಅಪಹರಿಸಿದ ಆರೋಪ ಮೇಲೆ ಬಂಧನಕ್ಕೆ ಒಳಗಾಗಿದ್ದ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು ಇಂದು ಮಂಗಳವಾರ ಜೈಲಿನಿಂದ ಅವರು ಬಿಡುಗಡೆಯಾಗಲಿದ್ದಾರೆ.
ಇಂದು ಕೋರ್ಟ್ ನಲ್ಲಿ ನ್ಯಾಯಾಧೀಶರಿಂದ ಬಿಡುಗಡೆ ಆದೇಶ ಬಂದ ಬಳಿಕ ಹೆಚ್ ಡಿ ರೇವಣ್ಣಗೆ ಬಿಡುಗಡೆ ಭಾಗ್ಯ ದೊರೆಯಲಿದೆ.
ಸೋಮವಾರ ಕೋರ್ಟ್ ನಲ್ಲಿ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಆರೋಪಿಗಳು ಮತ್ತು ಅಭಿಯೋಜಕರ ವಾದವನ್ನು ಆಲಿಸಿದ ನಂತರ ಆದೇಶವನ್ನು ಪ್ರಕಟಿಸಿದರು.
ಇದಕ್ಕೂ ಮುನ್ನ ರೇವಣ್ಣ ಪರ ಹಿರಿಯ ವಕೀಲ ಸಿ ವಿ ನಾಗೇಶ್ ವಾದ ಮಂಡಿಸಿ, 1999 ರಲ್ಲಿ ಅಫ್ಘಾನಿಸ್ತಾನದ ಕಂದಹಾರ್‌ಗೆ ತೆರಳುತ್ತಿದ್ದ ಇಂಡಿಯನ್ ಏರ್ ಲೈನ್ಸ್ ವಿಮಾನವನ್ನು ಅಪಹರಿಸಿದ ಪ್ರಕರಣದಲ್ಲಿ ಭಯೋತ್ಪಾದಕರನ್ನು ಶಿಕ್ಷಿಸಲು ಐಪಿಸಿಯ ಸೆಕ್ಷನ್ 364ಕ್ಕೆ ತಿದ್ದುಪಡಿ ಮಾಡುವ ಮೂಲಕ ತನ್ನ ಕಕ್ಷಿದಾರರ ವಿರುದ್ಧ ಸೆಕ್ಷನ್ 364 (ಎ) ನ್ನು ಪರಿಚಯಿಸಲಾಗಿತ್ತು.
ಆರೋಪಿ ರೇವಣ್ಣನ ವಿರುದ್ಧ ಐಪಿಸಿ ಸೆಕ್ಷನ್ 364 (ಎ) ಮತ್ತು 365 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧದ ತೀವ್ರತೆಯನ್ನು ವಿವರಿಸಲು ಹಿರಿಯ ವಕೀಲ ನಾಗೇಶ್ ಕೋರ್ಟ್ ಗೆ ಇದನ್ನು ವಿವರಿಸಿದ್ದರು. ಲೋಕಸಭೆ ಚುನಾವಣೆ ವೇಳೆ ರಾಜಕೀಯ ಕಾರಣಕ್ಕೆ ರೇವಣ್ಣ ಅವರನ್ನು ಈ ಪ್ರಕರಣಕ್ಕೆ ಎಳೆದು ತರಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇದಕ್ಕೆ ಪ್ರತಿಯಾಗಿ, ಹೆಚ್ಚುವರಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ಜಯನಾ ಕೊಠಾರಿ ಮತ್ತು ಅಶೋಕ್ ನಾಯಕ್ ಅವರು ಆರೋಪಿಯು ಇನ್ನೂ ತಲೆಮರೆಸಿಕೊಂಡಿರುವ ತನ್ನ ಮಗನ ಅನೇಕ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಮುಚ್ಚಿಹಾಕಲು ಸಂತ್ರಸ್ತೆಯನ್ನು ಅಪಹರಿಸಿದರು ಎಂದು ವಾದಿಸಿದರು. ಅಲ್ಲದೆ, ಸಂತ್ರಸ್ತೆ ತನ್ನ ಹೇಳಿಕೆಯಲ್ಲಿ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ್ದು, ಇದು ಅಪಹರಣದ ಸ್ಪಷ್ಟತೆಯನ್ನು ಸೂಚಿಸುತ್ತದೆ ಎಂದರು.
ಇದು ಸಾಬೀತಾದರೆ ಶಿಕ್ಷೆಯ ತೀವ್ರತೆ ಈ ಪ್ರಕರಣದಲ್ಲಿ ಹೆಚ್ಚು ಎಂದು ಅವರು ಹೇಳಿದರು. ಆರೋಪಿಯು ಪ್ರಭಾವಿಯಾಗಿರುವುದರಿಂದ ಸಂತ್ರಸ್ತೆ, ಸಾಕ್ಷಿಗಳಿಗೆ ಅಪಾಯದ ಭೀತಿ ಮತ್ತು ಸಾಕ್ಷ್ಯವನ್ನು ನಾಶಪಡಿಸುವ ಸಾಧ್ಯತೆಯಿದೆ ಎಂದು ವಾದಿಸಿದರು.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಹೆಚ್ ಡಿ ರೇವಣ್ಣ ಅವರನ್ನು ಕಳೆದ ಮೇ 4 ರಂದು ಬಂಧಿಸಲಾಗಿತ್ತು.