ಬೆಂಗಳೂರು: ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.
ಜೂನ್ 1ರಿಂದ 29ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಬಿಸಿಸಿಐ 15 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟ ಮಾಡಿದೆ.
ಆದರೆ, ವರದಿಗಳ ಪ್ರಕಾರ ಭಾರತದ ಟಿ20 ವಿಶ್ವಕಪ್ ತಂಡ ಕಟ್ಟುವಾಗಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ 15ರ ಬಳಗದಲ್ಲಿ ಸ್ಥಾನ ನೀಡಲು ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್‌ಗೆ ಇಷ್ಟ ಇರಲಿಲ್ಲ ಎಂಬ ಸಂಗತಿ ಹೊರಬಿದ್ದಿದೆ.
ಟೀಮ್ ಇಂಡಿಯಾಗೆ ಹತ್ತಿರದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಲಯದ ಬಗ್ಗೆ ನಾಯಕ ರೋಹಿತ್ ಶರ್ಮಾ ಮತ್ತು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್‌ಗೆ ಅಸಮಾಧಾನವಿದೆ ಎಂಬುದು ತಿಳಿದುಬಂದಿದೆ. ಅಂದಹಾಗೆ ಕಳೆದ ವರ್ಷ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆ ಎದುರಿಸುವ ಮುನ್ನ ಭಾರತದ ಟಿ20 ತಂಡದ ಕ್ಯಾಪ್ಟನ್ ಆಗಿ ಯಶಸ್ಸು ಕಂಡಿದ್ದರು. ಆದರೆ, 2023ರ ಐಸಿಸಿ ಒಡಿಐ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು 5 ತಿಂಗಳು ಸಮಯ ಕ್ರಿಕೆಟ್‌ನಿಂದ ದೂರ ಉಳಿದಿದ್ದದ್ದು ಅವರ ಲಯದ ಮೇಲೆ ಪರಿಣಾಮ ಬೀರಿದೆ. ಐಪಿಎಲ್ 2024 ಟೂರ್ನಿಯಲ್ಲಿ 200 ರನ್ ಗಳಿಸಿರುವ ಹಾರ್ದಿಕ್ ಕೇವಲ 11 ವಿಕೆಟ್ ಮಾತ್ರವೇ ಪಡೆದಿದ್ದಾರೆ. ಇದು ಟೀಮ್ ಇಂಡಿಯಾದ ಕ್ಯಾಪ್ಟನ್ ಮತ್ತು ಸೆಲೆಕ್ಟರ್ಸ್‌ಗೆ ಅಸಮಾಧಾನ ತಂದಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯ ಉತ್ತಮ ಅಂಕಿಅಂಶ ಹೊಂದಿದ್ದಾರೆ. ಇದೇ ಕಾರಣಕ್ಕೆ ಬಿಸಿಸಿಐ ಅವರನ್ನು ಭಾರತದ ಟಿ20 ತಂಡದ ವೈಸ್ ಕ್ಯಾಪ್ಟನ್ ಸ್ಥಾನದಲ್ಲಿ ಉಳಿದಿಕೊಂಡಿದೆ. ಇನ್ನು ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ ನೂತನ ಕ್ಯಾಪ್ಟನ್ ಆಗಿ ಪಟ್ಟಾಭಿಷೇಕ ಮಾಡಿಸಿಕೊಳ್ಳಲಿದ್ದಾರೆ ಎಂದೇ ಮೂಲಗಳು ಮಾಹಿತಿ ಹೊರಹಾಕಿರುವುದಾಗಿ ದೈನಿಕ್ ಜಾಗರಣ್ ವರದಿ ಮಾಡಿದೆ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ನಡುವಣ ಮುಸುಕಿನ ಗುದ್ದಾಟದ ಕಾರಣ ಮುಂಬೈ ಇಂಡಿಯನ್ಸ್ ತಂಡ ಅಂಕಪಟ್ಟಿಯ ಕೊನೆಯಸ್ಥಾನದೊಂದಿಗೆ ಪ್ಲೇ-ಆಫ್ಸ್ ರೇಸ್‌ನಿಂದ ಹೊರಬಿದ್ದಿದೆ. ಟಿ20 ಕ್ರಿಕೆಟ್ ವಿಶ್ವಕಪ್‌ನಲ್ಲೂ ಭಾರತ ತಂಡದಲ್ಲಿ ಈ ರೀತಿ ಆಗದೇ ಇರಲಿ ಎಂದು ಅಭಿಮಾನಿಗಳು ಈಗ ಪ್ರಾರ್ಥನೆ ಶುರು ಮಾಡಿದ್ದಾರೆ.