ಬೆಂಗಳೂರು: ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ಜೂನ್ 1ರಿಂದ 29ರವರೆಗೆ ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಆಗಲಿದ್ದು, ಈ ಕೂಟಕ್ಕೆ ಪೂರ್ವಭಾವಿಯಾಗಿ ಭಾರತ ಏಕೈಕ ಅಭ್ಯಾಸ ಪಂದ್ಯವನ್ನು ಆಡಲಿದೆ.
ಭಾರತ ತಂಡ ತನ್ನ ಬಹುತೇಕ ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಿದೆ. ಇನ್ನು ಮಹತ್ವದ ಟೂರ್ನಿ ಆರಂಭಕ್ಕೂ ಮುನ್ನ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಅಂತಹ ತಂಡಗಳು ಅಭ್ಯಾಸ ಪಂದ್ಯಗಳಿಂದ ಹಿಂದೆ ಸರಿದರೆ, ರೋಹಿತ್ ಶರ್ಮಾ ಸಾರಥ್ಯದ ಭಾರತ, ಅಪಾಯಕಾರಿ ಬಾಂಗ್ಲಾದೇಶ ಎದುರು ಅಭ್ಯಾಸ ಪಂದ್ಯವನ್ನು ಆಡಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 17ನೇ ಆವೃತ್ತಿಯ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಸಲುವಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದೆ
2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ತಂಡಗಳಿಗೆ 2 ಅಭ್ಯಾಸ ಪಂದ್ಯಗಳನ್ನು ಆಡಲು ಅವಕಾಶ ಇರುತ್ತದೆ. ಈ ಬಾರಿ ಟೂರ್ನಿಯಲ್ಲಿ ದಾಖಲೆ ಎಂಬಂತೆ ಒಟ್ಟಾರೆ 20 ತಂಡಗಳು ಸ್ಪರ್ಧೆಯಲ್ಲಿವೆ. ಇದರಲ್ಲಿ ಪಾಕಿಸ್ತಾನ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಮಾತ್ರವೇ ಅಭ್ಯಾಸ ಪಂದ್ಯಗಳು ಬೇಡ ಎಂದು ಹಿಂದೆ ಸರಿದಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಒಟ್ಟಾರೆ 16 ಅಭ್ಯಾಸ ಪಂದ್ಯಗಳನ್ನು ಆಯೋಜಿಸಲು ಮುಂದಾಗಿದ್ದು, ಇದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ನ ಮಾನ್ಯತೆ ಇರುವುದಿಲ್ಲ. ತಂಡಗಳು ತನ್ನಲ್ಲಿನ ಎಲ್ಲ 15 ಆಟಗಾರರನ್ನು ಅಭ್ಯಾಸ ಪಂದ್ಯಗಳಲ್ಲಿ ಬಳಕೆ ಮಾಡಿಕೊಳ್ಳಬಹುದು ಎಂದು ಐಸಿಸಿ ತಿಳಿಸಿದೆ.
ಭಾರತ ತಂಡ ಆಯ್ಕೆ ಮಾಡಿಕೊಂಡಿರುವ ಏಕೈಕ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಅಮೆರಿಕದಲ್ಲಿ ಜೂನ್ 1ರಂದು ಪೈಪೋಟಿ ನಡೆಸಲಿದೆ. ಈ ಮೂಲಕ ಅಲ್ಲಿನ ಸ್ಥಿತಿಗತಿಗಳಿಗೆ ಹೊಂದಿಕೊಂಡು ಆಡಲು ಮತ್ತು ಅಲ್ಲಿನ ವಾತಾವರಣಕ್ಕೆ ಮೂಗೂಡಿಸಿಕೊಳ್ಳುವ ಪ್ರಯತ್ನ ಮಾಡಲಿದೆ.
ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ಆತಿಥೇಯ ಅಮೆರಿಕ, ಕೆನಡಾ, ಐರ್ಲೆಂಡ್ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡಗಳು ‘ಎ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿವೆ. ಭಾರತ ತಂಡ ಜೂನ್ 5ರಂದು ಆತಿಥೇಯ ಅಮೆರಿಕದ ಎದುರು ನ್ಯೂಯಾರ್ಕ್ನಲ್ಲಿ ತನ್ನ ಮೊದಲ ಗ್ರೂಪ್ ಪಂದ್ಯ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಬಳಿಕ ಜೂನ್ 9ರಂದು ನ್ಯೂಯಾರ್ಕ್ನಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ಎದುರು ಹೈ ವೋಲ್ಟೇಜ್ ಪಂದ್ಯ ಆಡಲಿದೆ.
ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಮೇ 22ರಿಂದ 30ರವರೆಗೆ 4 ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ಆಡುತ್ತಿರುವ ಕಾರಣ ವಿಶ್ವಕಪ್ ಅಭ್ಯಾಸ ಪಂದ್ಯಗಳಿಂದ ಹಿಂದೆ ಸರಿದಿವೆ. ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ಧ ಪಾಕಿಸ್ತಾನ 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯನ್ನು ಆಡಿತ್ತು. ಇನ್ನು ನ್ಯೂಜಿಲೆಂಡ್ ಕೂಡ ಏಪ್ರಿಲ್ನಲ್ಲಿ ಪಾಕಿಸ್ತಾನ ಎದುರು 5 ಪಂದ್ಯಗಳ ಟಿ20 ಸರಣಿಯನ್ನು ಆಡಿ ಅಮರಾಭ್ಯಾಸ ಕೈಗೊಂಡಿತ್ತು.